24/08/2025
ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಿ ಹೋರಾಡಲು ಕರೆ
ಹೊಸಪೇಟೆ ಅಗಸ್ಟ್ 24 - ನೌಕರರು ಹಾಗೂ ನಿವೃತ್ತ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಒಕ್ಕೂಟದ ರಾಜ್ಯ ಅಧ್ಯಕ್ಷ ಮಹದೇವಯ್ಯ ಮಠಪತಿ ಕರೆ ನಿಡಿದರು. ಅವರು ಇಂದು ಇಲ್ಲಿನ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ನಡೆದ ನಿವೃತ್ತ ನೌಕರರು ಹಾಗೂ ನೌಕರರ ಒಕ್ಕೂಟಗಳ ಜಂಟಿ ಸಮಾವೇಶವನ್ನು ಮಹದೇವಯ್ಯ ಮಠಪತಿಯವರು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ನಿವೃತ್ತ ನೌಕರರಿಂದ ವಸೂಲು ಮಾಡುವ ಕಮ್ಯುಟೇಷನ್ ಹಣವನ್ನು ನಮ್ಮ ರಾಜ್ಯದಲ್ಲಿ ಹದಿನೈದು ವರ್ಷಗಳ ಕಾಲ ಮುರಾವಳಿ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹತ್ತುವರೆ ವರ್ಷಗಳ ಕಾಲ ಮಾತ್ರ ಮುರಾವಳಿ ಮಾಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿನ ನೀತಿಯಿಂದಾಗಿ ಪ್ರತಿ ನಿವೃತ್ತ ನೌಕರನೂ ಏನಿಲ್ಲವೆಂದರೂ ಹತ್ತಾರು ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಟ್ಟುತ್ತಿದ್ದಾರೆ. ಹಾಗಾಗಿ ರಾಜ್ಯ ಸರಕಾರಕ್ಕೆ ಇದನ್ನು ಮನವರಿಕೆ ಮಾಡಿ ನಮ್ಮ ರಾಜ್ಯದಲ್ಲಿ ಕೂಡಾ ಕಮ್ಯಟೇಷನ್ ಮುರಾವಳಿ ಅವಧಿಯನ್ನು ಹತ್ತುವರೆ ವರ್ಷಗಳಿಗೆ ಕಡಿಮೆ ಮಾಡಿ ಮರು ಆದೇಶ ಮಾಡುವಂತೆ ಒತ್ತಾಯಿಸಲು ಒಕ್ಕೂಟವು ಹೋರಾಟವನ್ನು ಸಂಘಟಿಸಲಿದೆ ಎಂದು ಅವರು ಹೇಳಿದರು.
ನೌಕರರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್ ಎಸ್ ಜಯಕುಮಾರ್ ಮಾತನಾಡಿ ರಾಜ್ಯದಲ್ಲಿ ಮಂಜೂರಾಗಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಕೂಡಲೇ ಕಾಯಂ ಆಗಿ ನೇಮಕ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯ ಮಾಡಿದರು.
ಸರಕಾರಗಳನ್ನು ಓಲೈಸುವುದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗಳ ವೈಜ್ಞಾನಿಕ ಅಧ್ಯಯನ ಹಾಗೂ ಸಂಘಟಿತ ಹೋರಾಟಗಳ ಮೂಲಕ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಅವರು ಅಭಿಪ್ರಾಯ ಪಟ್ಟರು.
ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ ಲೆಂಡಿ, ರಾಜ್ಯ ಉಪಾಧ್ಯಕ್ಷ ಈ ಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕಿ ಸುನೀತಾ ಆಣ್ವೇಕರ್, ಜಿಲ್ಲಾ ಸಂಚಾಲಕ ಬಿಸಾಟಿ ತಾಯಪ್ಪ ನಾಯಕ , ರಾಜ್ಯಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ ಶಿವಶಂಕರ ಮಾತನಾಡಿದರು. ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ ಎರಡನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು ನೌಕರರ ವಿರೋಧಿ ಆಗಿವೆ. ಹಾಗಾಗಿ ಸರಕಾರ ಆ ಶಿಫಾರಸ್ಸುಗಳನ್ನು ಜಾರಿ ಮಾಡಬಾರದೆಂದು ಸರಕಾರವನ್ನು ಒತ್ತಾಯ ಮಾಡಿದರು.
ಸರಕಾರಗಳು ಜಾರಿ ಮಾಡುತ್ತಿರುವ ನೌಕರರ ವಿರೋಧಿ ನೀತಿಗಳನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ನಿರ್ದೇಶಿಸಿ ನಿಯಂತ್ರಿಸುತ್ತಿರುವುದನ್ನು ನೌಕರರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದೂ ಅವರು ಹೇಳಿದರು.
ಜಿಲ್ಲೆಯ ನೂರಾರು ನಿವೃತ್ತ ನೌಕರರು, ಹಾಲಿ ನೌಕರರು, ಎನ್ ಪಿ ಎಸ್ ನೌಕರರು, ಗುತ್ತಿಗೆ ನೌಕರರು, ಅಥಿತಿ ಶಿಕ್ಷಕರು, ಅಥಿತಿ ಉಪನ್ಯಾಸಕರು ಇಂದಿನ ಜಂಟಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಕಂಪ್ಲಿ ಚಂದ್ರಪ್ಪ ಸ್ವಾಗತಿಸಿದರು, ನಾಗರಾಜ ಪತ್ತಾರ್ ನಿರೂಪಿಸಿದರು, ಎಂ ಧನರಾಜ್ ವಂದಿಸಿದರು.