20/08/2026
ನಿನ್ನೆ ಬುಧವಾರದ ಸಂತೆಯ ದಿನ ಸಂಜೆ, ಕುಣಿಗಲ್ ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ಮೊಬೈಲ್ ಬಳಸುತ್ತಾ ಅತಿ ನಿಧಾನವಾಗಿ ಪೊಲೀಸ್ ವಾಹನ ಚಲಾಯಿಸುವ ಮೂಲಕ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದ ಕುಣಿಗಲ್ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಪ್ರಶ್ನಿಸಿದ ಕಾರಣಕ್ಕೆ, “ನನ್ನನ್ನೇ ಪ್ರಶ್ನೆ ಮಾಡುತ್ತೀಯಾ?” ಎಂದು ಹೇಳಿ ನನ್ನ ಕೊರಳಪಟ್ಟಿ ಹಿಡಿದು ಎಳೆದಾಡಿ, ಅವಾಚ್ಯವಾಗಿ ಬೈದು, ಠಾಣೆಗೆ ಕರೆದುಕೊಂಡು ಹೋಗಿ ಹಲವು ಗಂಟೆಗಳ ಕಾಲ ಕೂಡಿ ಹಾಕಿ, ನಂತರ ನನ್ನ ಗಾಡಿಯನ್ನು ವಶಕ್ಕೆ ಪಡೆದು ರಾತ್ರಿ ವೇಳೆಗೆ ನನ್ನನ್ನು ಬಿಟ್ಟು ಕಳುಹಿಸಿದ್ದಾರೆ.
ಒಬ್ಬ ವಿದ್ಯಾವಂತ ಶಿಕ್ಷಕನಾದ ನನಗೆ ಇದರಿಂದ ಸಾಕಷ್ಟು ಅವಮಾನವಾಯಿತು, ನೋವಾಯಿತು. “ದಯವಿಟ್ಟು ನನಗೆ ನ್ಯಾಯ ಕೊಡಿಸಿ” ಎಂದು ಹೇಳಿ, ಅದೇ ರಾತ್ರಿ KRS ಪಕ್ಷದ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು, ಅಲ್ಲಿಂದ ನನ್ನ ಮೊಬೈಲ್ ನಂಬರ್ ಪಡೆದು ನನಗೆ ಫೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಪೊಲೀಸರ ದೌರ್ಜನ್ಯಕ್ಕೆ ತುತ್ತಾಗಿ ನಮ್ಮ ಪಕ್ಷದವರಿಗೆ ಯಾರಾದರೂ ಫೋನ್ ಮಾಡಿದಾಗ, ನಾವು ಅವರಿಗೆ ಹಾಕುವ ಮೊದಲ ಷರತ್ತು ಏನೆಂದರೆ — “ನೀವು ನಮ್ಮ ಜೊತೆ ಬಂದರೆ ಮಾತ್ರ ನಾವು ನಿಮ್ಮ ಪರವಾಗಿ ನ್ಯಾಯ ಕೇಳಲು ಮುಂದಾಗುತ್ತೇವೆ. ಇಲ್ಲದಿದ್ದರೆ, ನೀವು ನ್ಯಾಯ ಪಡೆಯಲು ಬೇರೆ ದಾರಿ ಹುಡುಕಿಕೊಳ್ಳಿ” ಎಂದು ನೇರವಾಗಿ ಹೇಳುತ್ತೇವೆ.
ಇಂದು ಬೆಳಿಗ್ಗೆ ನನಗೆ ಕರೆ ಮಾಡಿದ ವ್ಯಕ್ತಿಗೂ ನಾನು ಇದೇ ಮಾತನ್ನು ಹೇಳಿದೆ. ಅದಕ್ಕೆ ಒಪ್ಪಿಕೊಂಡ ಅವರು, “ಸರ್, ಆ ಇನ್ಸ್‌ಪೆಕ್ಟರ್ ‘ನಿನ್ನನ್ನು ಎತ್ತಿಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ. ಅವರಿಗೆ ಶಿಕ್ಷೆ ಕೊಡಿಸಲೇಬೇಕು. ನೀವು ಹೇಳಿದಂತೆ ನಿಮ್ಮ ಜೊತೆ ನಾನು ಪೊಲೀಸ್ ಠಾಣೆಗೆ ಬಂದು, ಇನ್ಸ್‌ಪೆಕ್ಟರ್ ವಿರುದ್ಧ ಡಿವೈಎಸ್‌ಪಿ ಅವರಿಗೆ ದೂರು ನೀಡುತ್ತೇನೆ” ಎಂದು ಒಪ್ಪಿಕೊಂಡರು.
ತಕ್ಷಣವೇ ಈ ವಿಚಾರವಾಗಿ ನಾನು ಬೆಳಿಗ್ಗೆ ಇಲ್ಲೇ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಮಾಡಿದೆ. ಆ ಪೋಸ್ಟ್ ನೋಡಿದ ಪೊಲೀಸರು ಎಚ್ಚೆತ್ತುಕೊಂಡು, ನಾವು ಠಾಣೆಗೆ ಹೋಗುವ ಮುನ್ನವೇ ಸಂತ್ರಸ್ತರನ್ನು ಕರೆಯಿಸಿ ಅವರ ಗಾಡಿಯನ್ನು ಹಿಂದಿರುಗಿಸಿದರೆ ರಗಳೆ ತಪ್ಪುತ್ತದೆ ಎಂಬುದು ನನ್ನ ಉದ್ದೇಶವಾಗಿತ್ತು.
ಕೇವಲ ಒಳ್ಳೆಯ ಪೊಲೀಸರು ಮಾತ್ರ ನಾನು ಮೇಲೆ ಹೇಳಿದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆದರೆ ಬಹುತೇಕರು ತಪ್ಪಿನ ಮೇಲೆ ಮತ್ತೊಂದು ತಪ್ಪು ಮಾಡಲು ತಮ್ಮ ಕ್ರಿಮಿನಲ್ ಬುದ್ಧಿಯನ್ನು ಬಳಸಲು ಪ್ರಾರಂಭಿಸಿಬಿಡುತ್ತಾರೆ. ಅಂತಹ ಎಲ್ಲ ತಪ್ಪುಗಳನ್ನು ಮಾಡಿಯೂ ತಪ್ಪಿಸಿಕೊಳ್ಳುವ ಸರ್ವಾಧಿಕಾರವನ್ನು ನಾವು ಅವರಿಗೆ ನೀಡಿದ್ದೇವಲ್ಲ. ನಮ್ಮ ಕುಣಿಗಲ್ ಪೊಲೀಸರಂತು ಈ ಪ್ರಕರಣದಲ್ಲಿ ಇಂದು ಮತ್ತು ನಿನ್ನೆ ಎರಡು ದಿನವೂ ಒಳ್ಳೆಯವರಂತೆ ನಡೆದುಕೊಂಡಿಲ್ಲ.
ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ನಂತರ ಏನೇನೋ ನಡೆದುಹೋಗಿದೆ. ಬೆಳಿಗ್ಗೆ 8 ಗಂಟೆಗೆ ನನಗೆ ಫೋನ್ ಮಾಡಿ, “ನ್ಯಾಯ ಕೊಡಿಸಿ” ಎಂದು ಬೇಡಿಕೊಂಡಿದ್ದ ವ್ಯಕ್ತಿಗೆ, ನಾನು ಬೆಂಗಳೂರಿನಿಂದ ಹೊರಡುವ ಮುನ್ನ ಸುಮಾರು 10 ಗಂಟೆಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.
ನನಗೆ ಅನುಮಾನ ಬಂದು, ನಮ್ಮ KRS ಪಕ್ಷದ ಕುಣಿಗಲ್ ಪದಾಧಿಕಾರಿಗಳಿಗೆ ಆ ವ್ಯಕ್ತಿಯ ಮೊಬೈಲ್ ನಂಬರ್ ನೀಡಿ, ಅವರೊಂದಿಗೆ ಮಾತನಾಡುವಂತೆ ತಿಳಿಸಿದೆ. ಅವರು ಬಯಸಿದರೆ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ, ಡಿವೈಎಸ್‌ಪಿ ಅವರಿಗೆ ದೂರು ಕೊಡಿಸಿ, ಅವರ ವಾಹನವನ್ನು ಬಿಡಿಸಲು ಸಹಕರಿಸುವಂತೆಯೂ ಸೂಚಿಸಿದೆ. ಈ ಕಾರಣದಿಂದ ನಾನು ಕುಣಿಗಲ್‌ಗೆ ಹೋಗುವ ಯೋಜನೆಯನ್ನು ಕೈಬಿಟ್ಟೆ.
ನಮ್ಮ ಕುಣಿಗಲ್ ತಾಲೂಕು ಅಧ್ಯಕ್ಷರು ಆ ವ್ಯಕ್ತಿಗೆ ಕರೆ ಮಾಡಿದಾಗ ಮೊದಲ ಬಾರಿ ಕರೆ ಸ್ವೀಕರಿಸಿದ ಅವರು, “11 ಗಂಟೆಗೆ ಕುಣಿಗಲ್‌ಗೆ ಬರುತ್ತೇನೆ” ಎಂದು ಹೇಳಿದ್ದರು. ಆದರೆ ನಂತರ ನಮ್ಮ ಪಕ್ಷದ ಪದಾಧಿಕಾರಿಗಳು ಕುಣಿಗಲ್‌ನಲ್ಲಿ ಕಾಯುತ್ತಾ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಆ ಸಂದರ್ಭದಲ್ಲಿ ನಾನು ಒಮ್ಮೆ ಕರೆ ಮಾಡಿದರೂ ನನ್ನ ಕರೆಯನ್ನೂ ಅವರು ಸ್ವೀಕರಿಸಲಿಲ್ಲ.
ನಂತರ ಸುಮಾರು ಒಂದು ಗಂಟೆಯ ವೇಳೆಗೆ ಆ ವ್ಯಕ್ತಿ ನನಗೆ ಕರೆ ಮಾಡಿ, “ನಾನು ಪೊಲೀಸ್ ಠಾಣೆಯ ಒಳಗಿದ್ದೇನೆ. ಪೊಲೀಸರು ನನಗೆ ಕರೆ ಮಾಡಿ ಗಾಡಿ ಕೊಡುತ್ತೇವೆ ಎಂದು ಕರೆಯಿಸಿ ಈಗ ತಪ್ಪೊಪ್ಪಿಗೆ ಪತ್ರ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಈ ವಿಚಾರವನ್ನು KRS ಪಕ್ಷದವರಿಗೆ ತಿಳಿಸಿದ್ದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ” ಎಂದು ತಿಳಿಸಿದರು.
ಆಗ ನಾನು ಸ್ವಲ್ಪ ಜೋರಾಗಿಯೇ, “ನೀವು ಒಬ್ಬ ಶಿಕ್ಷಕ ಎಂದು ಹೇಳಿಕೊಂಡು, ನಿಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಬೇಡಿಕೊಂಡು, ತಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ನಿಮಗೆ ನ್ಯಾಯ ಕೊಡಿಸಲು ಬಂದವರ ಕರೆಗಳನ್ನೇ ಸ್ವೀಕರಿಸದೆ, ನೀವೊಬ್ಬರೇ ಪೊಲೀಸ್ ಠಾಣೆಗೆ ಹೋಗಿ ಈಗ ಸಹಾಯ ಕೇಳಿದರೆ ಹೇಗೆ?” ಎಂದು ಪ್ರಶ್ನಿಸಿದೆ.
“ಈಗಲೂ ನಿಮಗೆ ಸಹಾಯ ಬೇಕಿದ್ದರೆ, ನಮ್ಮ ಪಕ್ಷದ ಪದಾಧಿಕಾರಿಗಳು ಠಾಣೆಯ ಹೊರಗಿದ್ದಾರೆ. ಅವರನ್ನು ಹೋಗಿ ಭೇಟಿ ಮಾಡಿ” ಎಂದು ಹೇಳಿ ಫೋನ್ ಇಟ್ಟೆ.
ಆ ನಂತರ ಏನೇನು ಕತೆ ನಡೆಯಿತೋ ಗೊತ್ತಿಲ್ಲ. ಪುಣ್ಯಾತ್ಮ ಮೇಷ್ಟ್ರಿಂದ ಮತ್ತೆ ಒಂದು ಕರೆ ಇಲ್ಲ, ಮಾಹಿತಿಯೂ ಇಲ್ಲ.
ಈ ಪ್ರಕರಣದಲ್ಲಿ ಏನಾಗಿದೆ ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.
ಬಹುತೇಕ ಸಂದರ್ಭಗಳಲ್ಲಿ KRS ಪಕ್ಷಕ್ಕೆ ವಿಚಾರ ಗೊತ್ತಾಗಿದೆ ಎಂದು ತಿಳಿದ ತಕ್ಷಣ, ಪೊಲೀಸರು ಸಂತ್ರಸ್ತರನ್ನು ಎದುರಿಸಿ, ಬೆದರಿಸಿ ಅಥವಾ ಪುಸಲಾಯಿಸಿ, ಆತ ನಮ್ಮ ಬಳಿ ಬರದಂತೆ ಹಾಗೂ ನಾವು ಆತನೊಂದಿಗೆ ಠಾಣೆಗೆ ಹೋಗದಂತೆ ನೋಡಿಕೊಂಡು ಬಿಡುತ್ತಾರೆ.ಬಹುಶಃ ಇಂದೂ ಕೂಡ ಅದೇ ಆಗಿರುತ್ತದೆ.
ಪೊಲೀಸರು ಆತನಿಗೆ ನ್ಯಾಯ ಕೊಡಿಸಿದ್ದಾರೋ ಅಥವಾ ನಡೆದ ಅನ್ಯಾಯದ ಮೇಲೆ ಮತ್ತೊಂದು ಅನ್ಯಾಯ ಮಾಡಿ ಆತನನ್ನು ಮನೆಗೆ ಕಳುಹಿಸಿದ್ದಾರೋ ಎಂಬುದು ಗೊತ್ತಾಗಿಲ್ಲ.
ಆದರೆ ಒಂದು ವಿಚಾರ ಮಾತ್ರ ಸ್ಪಷ್ಟ — ಅನ್ಯಾಯಕ್ಕೆ ಒಳಗಾದ ಜನರು ಧೈರ್ಯವಾಗಿ ಮುಂದೆ ಬಂದು ತಮ್ಮ ಹಕ್ಕಿಗಾಗಿ ಹೋರಾಡದಿದ್ದರೆ, ಅವರಿಗೆ ಯಾರಿಂದಲೂ ನ್ಯಾಯ ಕೊಡಿಸಲು ಸಾಧ್ಯವಿಲ್ಲ.
ಅನ್ಯಾಯವನ್ನು ಪ್ರಶ್ನಿಸುವ ಧೈರ್ಯವೇ ನ್ಯಾಯವನ್ನು ಪಡೆಯುವ ಮೊದಲ ಹೆಜ್ಜೆ.
ರಘು ಜಾಣಗೆರೆ
ಕಾರ್ಯಾಧ್ಯಕ್ಷ, ಕರಾಸ ಪಕ್ಷ.