21/08/2026
*ಮಾಧ್ಯಮ ಪ್ರಕಟಣೆ*
ಮಾನ್ಯರೆ,
ಇತ್ತೀಚೆಗೆ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಜನ-ಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಹಲವು ವಿಷಯಗಳು ಚರ್ಚೆಗೆ ಬಂದಿವೆ. ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಹೇಳಿಕೆ ನೀಡುತ್ತಿವೆ. ಪರಿಸರ ಪರ ಮತ್ತು ಪರಿಸರ ವಿರೋಧಿ ಹೋರಾಟಗಾರರೂ ಮಾತನಾಡುತ್ತಿದ್ದಾರೆ.
ಪರಿಸರವಾದಿಗಳಲ್ಲೇ ಭಿನ್ನಾಭಿಪ್ರಾಯಗಳಿವೆ. ಕೆಲವರದ್ದು ಉಗ್ರ ಪರಿಸರವಾದ. ಕೆಲವರದ್ದು ಡೀಲಿಂಗ್ ಪರಿಸರವಾದ. ಇನ್ನೂ ಕೆಲವರು ತಮ್ಮ ಸಹಜ ಪರಿಸರ ಜೀವನಾನುಭವದಿಂದ ಮಾತನಾಡುತ್ತಿದ್ದಾರೆ. ಈ ಎಲ್ಲ ಚರ್ಚೆಗಳು ಒಂದಷ್ಟು ಬಿರುಸಿನಿಂದ ಸಾಗುತ್ತಿವೆ. ಇದರ ನಡುವೆ ವೋಟಿಗಾಗಿ ಜನ್ಮತಾಳಿದ ಪಕ್ಷ ರಾಜಕಾರಣದ ಪ್ರಚಂಡರ ಗಾರ್ಧಭ ರಾಗದ ಆಲಾಪವೂ ನಡೆಯುತ್ತಿದೆ.
ಇತ್ಯಾದಿ. ಇತ್ಯಾದಿ…
ಇವೆಲ್ಲವನ್ನು ಪುಕ್ಕಟೆ ಮನರಂಜನೆ ಎಂದು ನಮ್ಮ ಜನಸಾಮಾನ್ಯರು ಯಾಮಾರಬಾರದು. ನಾವು ನಮ್ಮ ತಿಳಿವಳಿಕೆಯ ಮಿತಿಗಳನ್ನು ಒಪ್ಪಿಕೊಂಡೇ ಈ ಮಾತು ಹೇಳುತ್ತಿದ್ದೇವೆ. ಆದರೆ ಮುಂದಿರುವ ಅಪಾಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವುದು ಅಗತ್ಯ. ಇದು ಆ ಎಚ್ಚರಿಕೆಯ ಕರೆ.
ಈಗ ಮತ್ತೆ ನಿನ್ನೆ-ಮೊನ್ನೆಯಿಂದ ಇಕೋ ಸೆನ್ಸಿಟಿವ್ ಝೋನ್ ವಿಚಾರ ಶುರುವಾಗಿದೆ. ಆದರೆ ಸಮಸ್ಯೆ ಇಕೋ ಸೆನ್ಸಿಟಿವ್ ಝೋನ್‌ಗೆ ಮಾತ್ರ ಸೀಮಿತವಾಗಿಲ್ಲ. ಅದಕ್ಕಿಂತಲೂ ಭೀಕರವಾದ ಡೀಮ್ಡ್ ಫಾರೆಸ್ಟ್ ಡೆಫಿನೇಶನ್‌ನ ಆತಂಕವಿದೆ. ಒತ್ತುವರಿ ತೆರವು ಭಯವಿದೆ. ಮಲೆನಾಡಿನ ರೈತರಿಗೆ ಪಾರಂಪರಿಕ ಹಕ್ಕು ಇರುವ ಗೋಮಾಳದ ಪ್ರಶ್ನೆಯಿದೆ. ಸೊಪ್ಪಿನ ಬೆಟ್ಟದ ಪ್ರಶ್ನೆಯಿದೆ. ಕರಡ ಬ್ಯಾಣದ ಪ್ರಶ್ನೆಯಿದೆ. ಕಾನು, ಕುಮ್ಕಿ, ಹಾಡ್ಯ ಮತ್ತು ಊರೊಟ್ಟಿನ ಜಾಗದ ಭೂಮಿಯ ಪ್ರಶ್ನೆಯಿದೆ. ಈ ಭೂಮಿಗಳನ್ನು ಹಿಂದಿರುಗಿಸದೆ ಸರ್ಕಾರಗಳು ರೈತರಿಗೆ ಮೋಸ ಮಾಡುತ್ತಿವೆ. ಮತ್ತೊಂದೆಡೆ ಜಹಗೀರುದಾರಿಕೆ ಮತ್ತು ಇನಾಮದಾರಿಕೆ ಪುನರುಜ್ಜೀವನಗೊಳ್ಳುತ್ತಿರುವ ಆತಂಕವಿದೆ. ಡೋಂಗಿ ಖಾತೆಗಳ ಹೆಸರಿನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಆರೋಪಗಳಿವೆ. ಇದರಲ್ಲಿ ಧಾರ್ಮಿಕ ಪುಂಡರ ಹಾವಳಿಯೂ ಇದೆ. ಇವೆಲ್ಲ ಸೇರಿ ಮಲೆನಾಡಿನ ರೈತರ ಭವಿಷ್ಯವನ್ನು ಗಂಡಾಂತರಕಾರಿ ಸ್ಥಿತಿಗೆ ತಳ್ಳುತ್ತಿವೆ.
ಬಹಳ ವರ್ಷಗಳಿಂದ ರೈತ ಸಂಘ ಮತ್ತು ಸಮಾನ ಮನಸ್ಕ ಅನೇಕ ಸಂಘಟನೆಗಳು ಎಚ್ಚರಿಸುತ್ತಲೇ ಬಂದಿವೆ. ಭಾರತದ ಪಶ್ಚಿಮ ಘಟ್ಟವನ್ನು no man's land, ಅಂದರೆ ಜನರಹಿತ ಪ್ರದೇಶವನ್ನಾಗಿ ಮಾಡುವ ಅಂತರರಾಷ್ಟ್ರೀಯ ಪಿತೂರಿ ನಡೆಯುತ್ತಿದೆಯೆಂಬುದು ನಮ್ಮ ಆತಂಕ. ಭೂಗ್ರಹದ ಮೇಲೆ ಇಂತಹ ಸುಮಾರು ಮೂವತ್ತಾರು ಇಕೋ ಸೆನ್ಸಿಟಿವ್ ಝೋನ್‌ಗಳನ್ನು ವಿಶ್ವಸಂಸ್ಥೆ ಗುರುತಿಸಿದೆ. ಇದರ ಜೊತೆಗೆ ಕಾರ್ಪೊರೇಟ್ ದಾಸ್ಯದ ಅಂತರರಾಷ್ಟ್ರೀಯ ಬಂಡವಾಳ ಸಂಸ್ಥೆಗಳ ಪಾತ್ರದ ಬಗ್ಗೆಯೂ ಪ್ರಶ್ನೆಗಳಿವೆ. ಅವರ ಬಡ್ಡಿ ದುಡ್ಡಿನ ಒಂದು ಸಣ್ಣ ಬಿಕ್ಷೆಯನ್ನು ಸ್ವೀಕರಿಸಿ ಜೀವನ ಪೋರೆಯುವ ಎನ್‌ಜಿಒಗಳೂ ಕೈಜೋಡಿಸಿವೆ ಎಂಬ ಅನುಮಾನಗಳಿವೆ.
ಇಲ್ಲೆಲ್ಲ ಉತ್ಪತ್ತಿಯಾಗುವ ಆಮ್ಲಜನಕ ಪ್ರಪಂಚಕ್ಕೆ ಉಸಿರಾಗಬೇಕು ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಅದರಲ್ಲೂ ದೀಪಾವಳಿ ಪಟಾಕಿಗಳಿಗಿಂತ ಹೆಚ್ಚು ಮೋಜು ಸವಿಯುತ್ತಾ ಬಾಂಬುಗಳನ್ನು ಹಚ್ಚುತ್ತಾ, ಹಂಚುತ್ತಾ, ಯುದ್ಧಪಿಪಾಸು ಹುಚ್ಚರ ಆಡಳಿತವಿರುವ ಅಭಿವೃದ್ಧಿಪೀಡಿತ ಮುಂದುವರಿದ ದೇಶಗಳಿವೆ. ಅಂತಹ ದೇಶಗಳು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ. ಅದನ್ನು ಪೂರೈಸುವ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೊರಿಸಲಾಗುತ್ತಿದೆ. ಜತೆಗೆ, ಅವರ ಇಂಗಾಲವನ್ನು ನುಂಗಲು ವಿಷಕಂಠದಂತೆ ಪಶ್ಚಿಮ ಘಟ್ಟ ಇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಬಾರದು. ಇಲ್ಲಿನ ಕೃಷಿ ಮಾಡುವ ರೈತರನ್ನು ಕಾಡಿಗೆ ಮತ್ತು ಪ್ರಕೃತಿಗೆ ರೇಬಿಸ್ ಹಿಡಿಸುವ ಹುಚ್ಚು ನಾಯಿಗಳಂತೆ ಚಿತ್ರಿಸುವ ಪ್ರಯತ್ನ ನಡೆಯಬಾರದು. ಅದರ ಹಿಂದೆ ಇಂಟರ್‌ನ್ಯಾಷನಲ್ ಫಂಡಿಂಗ್‌ನ ವ್ಯವಸ್ಥಿತ ಕುಯುಕ್ತಿ ಇದೆ ಎಂಬ ಅನುಮಾನವನ್ನು ನಾವು ವ್ಯಕ್ತಪಡಿಸುತ್ತೇವೆ. ಇದು ಒಂದು ಸಂಚು ಎಂಬುದನ್ನೂ ಮರೆಯಬಾರದು.
ಇಲ್ಲಿನ ಜನರು ಜನಪ್ರತಿನಿಧಿಗಳ ಜೊತೆ ಮಾತನಾಡಲು ಬಯಸುತ್ತಾರೆ. ಸರ್ಕಾರದ ಜೊತೆ ಮಾತನಾಡಲು ಬಯಸುತ್ತಾರೆ. ಸರ್ಕಾರಿ ಯಂತ್ರದ ಜೊತೆ ಮಾತನಾಡಲು ಬಯಸುತ್ತಾರೆ. ಇಂತಹ ಗಂಭೀರ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಬಯಸುತ್ತಾರೆ. ಆದರೆ ಸರ್ಕಾರಗಳೇ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಂದೆ ನಡುಬಗ್ಗಿಸಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳ ಈ ನಿಷ್ಕ್ರಿಯತೆಯ ಕಾರಣಕ್ಕೆ ಜನರಿಂದ ಸಂಬಳ ಪಡೆದರೂ ಅಧಿಕಾರಶಾಹಿ ನೌಕರರ ಮುಂದೆ ಜನರು ಮಂಡಿಯೂರುವ ಸ್ಥಿತಿ ಬಂದಿದೆ. ಕೆಲವು ಅಧಿಕಾರಿಗಳು ಕೊಲೆಗಡುಕರಂತೆ ವರ್ತಿಸುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಬ್ಯುರೋಕ್ರಸಿ ತನ್ನನ್ನು ಬ್ರಿಟಿಷರ ಕಸಿಗಿಡಗಳೆಂದು ಭಾವಿಸುತ್ತಿದೆಯೇ ಎಂಬ ಪ್ರಶ್ನೆಯೂ ಇದೆ. ಪಶ್ಚಿಮ ಘಟ್ಟದ ನಿವಾಸಿಗಳನ್ನು ಮತ್ತು ರೈತರನ್ನು ಅತಿಕ್ರಮಣಕಾರರೆಂದು ಬಿಂಬಿಸಲಾಗುತ್ತಿದೆ. ಅವರು ಕಾಡು ಲೂಟಿ ಮಾಡಲು ಭೂಮಿಯ ಯಾವುದೋ ಮೂಲೆಯಿಂದ ಇಲ್ಲಿಗೆ ಬಂದವರಂತೆ ಚಿತ್ರಿಸಲಾಗುತ್ತಿದೆ. ಯಾವ ಯಾವ ಕಾಯ್ದೆಯ ಯಾವೆಲ್ಲ ಸೆಕ್ಷನ್‌ಗಳನ್ನು ಜೋಡಿಸಬೇಕು ಎಂದು ಸರ್ಕಾರಗಳಿಗೆ ಹೇಳಲಾಗುತ್ತಿದೆ. ಮಲೆನಾಡಿನವರನ್ನು ನ್ಯಾಯಾಲಯಗಳ ಮುಂದೆ ಹೇಗೆ ಎಳೆದು ತರಬೇಕು ಎಂಬುದಕ್ಕೂ ಮಾರ್ಗದರ್ಶನ ನೀಡಲಾಗುತ್ತಿದೆ.
ಇಂತಹ ಪರಿಸ್ಥಿತಿಯನ್ನು ನಾವು ಪ್ರಶ್ನಿಸಲೇಬೇಕಿದೆ. ರಾಜಕೀಯ ಪಕ್ಷಗಳ ನೇತಾರರಿಗೆ ನಾವು ವಿಧಾನಸಭೆಯಲ್ಲಿ ಮತ್ತು ಸಂಸತ್ತಿನಲ್ಲಿ ಚರ್ಚೆ ಮಾಡಿ ಎಂದು ಹೇಳುತ್ತೇವೆ. ರೈತ ವಿರೋಧಿ ಮತ್ತು ಜನವಿರೋಧಿ ಕಾನೂನುಗಳನ್ನು ಬದಲಾಯಿಸಿ ಎಂದು ಹೇಳುತ್ತೇವೆ. ಆದರೆ ಅವರು ಅದಕ್ಕೆ ಬೇರೆ ಉತ್ತರ ಕೊಡುತ್ತಾರೆ. "ನ್ಯಾಯಾಲಯಗಳು ಒಪ್ಪುವುದಿಲ್ಲ" ಎಂದು ನುಣುಚಿಕೊಳ್ಳಲು ಬಯಸುತ್ತಾರೆ. ದೇಶ ಬಿಟ್ಟು ಹೋಗುವಾಗ ಬ್ರಿಟಿಷರು ಭಾರತದ ನ್ಯಾಯಾಂಗವನ್ನು ತಮ್ಮ ಹಿಡಿತದಲ್ಲಿಯೇ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರೆ ಇವರು ಹೌಹಾರಿ ಓಡುತ್ತಾರೆ. "ಶಾಂತಂ ಪಾಪಂ" ಎನ್ನುತ್ತಾರೆ. ನ್ಯಾಯಾಧೀಶರಿಗೆ ಜೀವನವಿಡೀ ಮಸಕಾ ಹೊಡೆಯುವ ಕೆಲವು ವಕೀಲರಂತೆ ವರ್ತಿಸುವ ರಾಜಕಾರಣಿಗಳೂ ಇದ್ದಾರೆ. ಇಂತಹ ಅವ್ಯವಸ್ಥೆಯಲ್ಲಿ ಮಲೆನಾಡಿನ ಜನರಿಗೆ ನ್ಯಾಯ ಕೊಡಿಸಲು ರಾಜಕಾರಣಿಗಳಿಂದ ಸಾಧ್ಯವಿಲ್ಲ ಎಂಬುದನ್ನು ನಾವು ಮನಗಾಣಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮಲೆನಾಡಿನ ಜನ ಸ್ವಯಂಪ್ರೇರಿತವಾಗಿ ಎತ್ತಂಗಡಿಗೊಳ್ಳುವಂತೆ ಮಾಡುವ ಯೋಜನೆಗಳು ರೂಪುಗೊಳ್ಳುತ್ತಿವೆ ಎಂಬ ಆತಂಕವಿದೆ. ಅರಣ್ಯ, ಪರಿಸರ ಮತ್ತು ಜೀವವೈವಿಧ್ಯ ತಾಣಗಳ ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ಯೋಜನೆಗಳು ಬರುತ್ತಿವೆ. ಆಧುನಿಕ ಅಭಿವೃದ್ಧಿ ಎಂಬ ಹೆಸರಿನಲ್ಲೂ ಯೋಜನೆಗಳು ಬರುತ್ತಿವೆ. ಇವು ಜನವಿರೋಧಿ ಕೃತಕ ಯೋಜನೆಗಳಾಗಬಾರದು. ಕಂತ್ರಾಟುದಾರರ ಕಿಸೆಯೊಳಗಿನ ಡಿಪಿಆರ್ ಯೋಚನೆಗಳಾಗಬಾರದು. ಹುಲಿ ಮತ್ತು ಸಿಂಹಧಾಮಗಳು ಬರುತ್ತಿವೆ. ಆನೆ ಮತ್ತು ಚಿರತೆ ಕಾರಿಡಾರ್‌ಗಳು ಬರುತ್ತಿವೆ. ಮಂಗ ಮತ್ತು ಸಿಂಗಳೀಕಗಳಿಗೆ ಫುಟ್‌ಪಾತ್‌ಗಳ ಯೋಜನೆಗಳೂ ಬರುತ್ತಿವೆ. ಕಾಡುಕೋಣ, ಎಮ್ಮೆ, ಜಿಂಕೆ, ನವಿಲು, ಕಾಡುಕೋಳಿ, ತೋಳ, ನರಿ, ಸೀಳುನಾಯಿಗಳ ಹೆಸರಿನಲ್ಲಿ ತರಹೇವಾರಿ ಅಭಯಾರಣ್ಯಗಳು ಬರುತ್ತಿವೆ. ಈಗಾಗಲೇ ಮೀಸಲು ಅರಣ್ಯಗಳಿವೆ. ಸಂರಕ್ಷಿತ ಅರಣ್ಯಗಳಿವೆ. ಇವೆಲ್ಲದರ ನಡುವೆ ರೈತರ ಬದುಕಿನ ಪ್ರಶ್ನೆ ಎಲ್ಲಿದೆ?
ರೈತರನ್ನು ಬಹಳ ಕೀಳಾಗಿ ನೋಡುವ ಆಡಳಿತ ನಮ್ಮಲ್ಲಿದೆ. ಅವರನ್ನು ಭಯಭೀತರನ್ನಾಗಿ ಮಾಡಲಾಗುತ್ತಿದೆ. ಊರು-ಕೇರಿ ಬಿಟ್ಟು ಹೋಗುವಂತೆ ಕಿರುಕುಳ ನೀಡಲಾಗುತ್ತಿದೆ. ಇದನ್ನೇ ಪರಿಸರ ಸ್ನೇಹಿ ಎಂಬ ಹೆಸರಿನಲ್ಲಿ ಪ್ರಕೃತಿಯ ಮೇಲಿನ ಹಾದರವಾಗಿ ಮುಂದುವರಿಸಲಾಗುತ್ತಿದೆ. ನಗರೀಕರಣದ ಹೆಸರಿನಲ್ಲಿ ಜನರನ್ನು ಎತ್ತಂಗಡಿ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳಿಗಾಗಿ ಜನರನ್ನು ಸ್ಥಳಾಂತರಿಸಲಾಗಿದೆ. ವಿದ್ಯುತ್ ಯೋಜನೆಗಳಿಗಾಗಿ ಜನರನ್ನು ಸ್ಥಳಾಂತರಿಸಲಾಗಿದೆ. ನೀರಾವರಿ ಯೋಜನೆಗಳಿಗಾಗಿ ಜನರನ್ನು ಸ್ಥಳಾಂತರಿಸಲಾಗಿದೆ. ಅಣೆಕಟ್ಟುಗಳ ನಿರ್ಮಾಣಕ್ಕಾಗಿ ಸಾವಿರಾರು ಕುಟುಂಬಗಳು ನಿರ್ಗತಿಕರಾಗಿವೆ. ಕೆಲವು ಸಂದರ್ಭಗಳಲ್ಲಿ ಲಕ್ಷಾಂತರ ಜನರ ಬದುಕು ಬದಲಾಗಿದೆ. ಇದರ ಕರಾರುವಕ್ಕಾದ ಲೆಕ್ಕವನ್ನು ಹೇಳುವ ರಾಜಕೀಯ ಪಕ್ಷಗಳು ಯಾವುದಾದರೂ ಇವೆಯೇ?
ಜನರನ್ನು ಎತ್ತಂಗಡಿ ಮಾಡಿದ ಅಭಿವೃದ್ಧಿಯ ಲೆಕ್ಕವನ್ನು ಕೇಳುವವರು ಯಾರು? ಇದೀಗ ಭಾರತದ ಒಕ್ಕೂಟ ಸರ್ಕಾರ ಕೆಲವು ದಿನಗಳ ಹಿಂದೆ ಪಶ್ಚಿಮ ಘಟ್ಟ ಪ್ರದೇಶದ 'ಇಕೋ ಸೆನ್ಸಿಟಿವ್ ಏರಿಯಾ' ಅಧಿಸೂಚನೆ ಹೊರಡಿಸಿದೆ. ಅದರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೂ ನೀಡಲಾಗಿದೆ. ಇಂದಿನ ಕಾಲಮಾನದಲ್ಲಿ ಆನ್‌ಲೈನ್ ಆಕ್ಷೇಪಣೆ ಸಲ್ಲಿಸಲು ಪಂಡಿತರು ಬೇಕಾಗಿಲ್ಲ. ಎಲ್ಲ ಊರುಗಳಲ್ಲೂ ಡಿಜಿಟಲ್ ತಂತ್ರಜ್ಞಾನ ಬಳಸಬಲ್ಲ ಮಕ್ಕಳು ಇದ್ದಾರೆ. ಬಹುತೇಕ ಕುಟುಂಬಗಳಲ್ಲೂ ಅಂತಹ ಮಕ್ಕಳು ಇದ್ದಾರೆ. ಹೀಗಿರುವಾಗ ಜನರು ಸ್ವತಃ ಆಕ್ಷೇಪಣೆ ಸಲ್ಲಿಸಬಹುದು. ರಾಜಕೀಯ ಪುಢಾರಿಗಳು ಇದನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಿಲ್ಲ. "ನಾನು, ನಾನು, ನಾನು ಇದನ್ನು ನಿಭಾಯಿಸುತ್ತೇನೆ" ಎಂದು ಸಭೆ ಕರೆಯುವ ಅಗತ್ಯವೂ ಇಲ್ಲ. ಪಾದಯಾತ್ರೆ ಮಾಡುವ ಅಗತ್ಯವೂ ಇಲ್ಲ. ಪ್ರತಿಭಟನೆ ಮಾಡುವ ಗಾಂಚಾಲಿ ಚಾಳಿಯೂ ಬೇಡ.
ನೇರವಾಗಿ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಓದಬೇಕು. ಸುಪ್ರೀಂ ಕೋರ್ಟ್‌ನ ಡೀಮ್ಡ್ ಫಾರೆಸ್ಟ್ ಡೆಫಿನೇಶನ್‌ಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಂತರ ನಿಮ್ಮ ಸರ್ಕಾರಗಳಿಗೆ ಮತ್ತು ಸರ್ಕಾರ ನಡೆಸುವ ನಿಮ್ಮ ಪಕ್ಷಗಳಿಗೆ ಪಾಠ ಮಾಡಬೇಕು. ಕಿವಿ ಹಿಂಡಿಯಾದರೂ ಪಾಠ ಮಾಡುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ಅದಾದ ನಂತರವೇ ಜನರ ಮುಂದೆ ಬಾಯಿ ಬಿಡುವುದೋ, ಹಲ್ಲು ಗಿಂಜುವುದೋ ಯೋಚಿಸಿ ಮುಂದೆ ಹೋಗಿ ಎನ್ನಬೇಕಿದೆ. ಅರಣ್ಯ ಕಾಯ್ದೆಗಳಲ್ಲಿರುವ ಜನವಿರೋಧಿ ಅಂಶಗಳನ್ನು ಹೆಕ್ಕಿ ತೆಗೆದು ಹೇಳುವ ಅಗತ್ಯವಿದೆ.
ಮಲೆನಾಡಿಗರ ಭವಿಷ್ಯ ಅದನ್ನೇ ಅವಲಂಬಿಸಿದೆ. ಜನಪ್ರತಿನಿಧಿಗಳು ಎಲ್ಲವನ್ನೂ ತಿಳಿದಿದ್ದಾರೆ ಎಂದು ನಾವು ಹೇಳುವುದಿಲ್ಲ. ರಾಜಕಾರಣಿಗಳು ಎಲ್ಲವನ್ನೂ ತಿಳಿದಿದ್ದಾರೆ ಎಂದು ಹೇಳುವುದಿಲ್ಲ. ಆಡಳಿತ ಪಕ್ಷಗಳ ಕಾರ್ಯಕರ್ತರು ಮತ್ತು ನೇತಾರರಿಗೆ ಇವೆಲ್ಲ ತಿಳಿದಿದೆ ಎಂದೂ ಹೇಳುವುದಿಲ್ಲ. ಆದರೆ ಈ ಸಮಸ್ಯೆಗೆ ಒಂದು ಲಾಜಿಕಲ್ ಅಂತ್ಯ ಸಿಕ್ಕರೆ ಮಲೆನಾಡಿನ ಜನರು ಈ ರಾಜಕಾರಣಿಗಳ ಮನೆ ಮುಂದೆ ಬಿಕ್ಷುಕರಂತೆ ನಿಲ್ಲುವುದಿಲ್ಲ ಎಂಬ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಮಲೆನಾಡಿನ ಭೂಮಿ ಹಕ್ಕಿನ ಸಮಸ್ಯೆ ತಾರ್ಕಿಕ ಅಂತ್ಯ ಕಾಣಬಾರದು ಎಂಬ ರಾಜಕೀಯ ಆಸಕ್ತಿ ಇರಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಮಸ್ಯೆ ತಾರ್ಕಿಕ ಅಂತ್ಯ ಕಂಡರೆ ಈ ಭಾಗದ ರಾಜಕಾರಣ ಜಗತ್ತಿನ ಎಲ್ಲ ಪ್ರದೇಶಗಳಿಗೂ ಮಾದರಿಯಾಗಬಹುದು.
ಆದರೆ ಅದೇ ಇಲ್ಲಿನ ಪುಢಾರಿಗಳಿಗೆ ಮಾರಕವಾಗಬಹುದು. ಇದೇ ಕಾರಣಕ್ಕೆ ಸಮಸ್ಯೆ ಬಗೆಹರಿಯದೆ ಉಳಿಯುತ್ತಿದೆಯೇ ಎಂಬುದನ್ನೂ ಜನರು ಯೋಚಿಸಬೇಕು. ಪರಸ್ಪರ ಕಚ್ಚಾಡುವ ನಾಟಕವಾಡುವ ಈ ಪುಢಾರಿಗಳು ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಯಾವುದೋ ಒಂದು ಭೂಮಿ ಕ್ರಯದ ವಿವಾದವನ್ನು ದೊಡ್ಡ ವಿಚಾರವನ್ನಾಗಿ ಮಾಡಿದ್ದಾರೆ. ಅದನ್ನು ಭೂಮಿಯ ಮೇಲಿನ ದೊಡ್ಡ ವಿವಾದವೆಂದು ಜನರ ಕಣ್ಣಿಗೆ ಮಣ್ಣೆರಚುವಂತೆ ಬಿಂಬಿಸಿದ್ದಾರೆ. ಆದರೆ ಇದರ ಹಿಂದೆ ಏನಿದೆ ಎಂಬುದನ್ನು ಜನರು ಗಮನಿಸಬೇಕು. ಇದು ಇನಾಮದಾರಿಕೆ, ಜಹಗೀರುದಾರಿಕೆ ಮತ್ತು ಜಮೀನುದಾರಿಕೆಯ ಹೊಸ ಕಾರ್ಪೊರೇಟೀಕರಣದ ಅಡಿಗಲ್ಲಿನ ಮೇಲೆ ಪಕ್ಷಾತೀತವಾಗಿ ನಡೆಸಿದ ಮಸಲತ್ತು ಎಂಬುದನ್ನು ಗಮನಿಸಬೇಕಿದೆ.
ಸಾಮಾನ್ಯ ಜನರಿಗೆ ಈ ವಿಷಯ ಅರ್ಥವಾಗದಂತೆ ಟೀಕೆಯ ನಾಟಕವಾಡಿ ಮುಗಿಸಿದರು. ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಟ್ಟ ಭೂಮಿ ಖರೀದಿಸಿದ ರಾಜಕಾರಣಿಯೂ ಈ ವಿಚಾರದಲ್ಲಿದ್ದಾರೆ. ಆರೋಪ ಹೊರಿಸಿದವರೂ ಇದ್ದಾರೆ. ಆದರೆ ಎಲ್ಲರೂ ಒಗ್ಗಟ್ಟಾಗಿ ಕೆಲವು ಪ್ರಶ್ನೆಗಳಿಂದ ದೂರ ಸರಿಯುತ್ತಿರುವಂತೆ ಕಾಣುತ್ತದೆ. ಭೂಮಿಯನ್ನು ಮಾರಾಟ ಮಾಡಿದ ಧಾರ್ಮಿಕ ಮಠದ ಸ್ವಾಮಿ ಯಾರು? ಕಂದಾಯ ಇಲಾಖೆಯ ಕೆಲವು ದಗಲ್ಭಾಜಿಗಳ ಪಾತ್ರ ಏನು? ನ್ಯಾಯಾಂಗದಲ್ಲಿ ಇದ್ದುಕೊಂಡು ಆಟವಾಡಿದ ದುರುಳರ ಪಾತ್ರ ಏನು? ಇವರ ತಲೆ ಕಾಯಲು ತಮ್ಮ ಮರ್ಯಾದೆಯನ್ನೇ ಅಡವಿಟ್ಟವರ ಪಾತ್ರ ಏನು? ಈ ಎಲ್ಲ ಪ್ರಶ್ನೆಗಳೂ ತನಿಖೆಯಾಗಬೇಕು. ಇಲ್ಲವಾದರೆ ಇವರೆಲ್ಲರೂ ಇತಿಹಾಸದಲ್ಲಿ ಕಳಂಕಿತ ಸ್ಥಾನದಲ್ಲಿ ನಿಲ್ಲಲಿದ್ದಾರೆ.
ಕಡಿದಾಳು ಮಂಜಪ್ಪನವರು ಮತ್ತು ಶಾಂತವೇರಿ ಗೋಪಾಲಗೌಡರು ಇನಾಮದಾರರ ವಿರುದ್ಧ ಹೋರಾಡಿದರು. ಜಹಗೀರುದಾರರ ವಿರುದ್ಧ ಹೋರಾಡಿದರು. ಜಮೀನುದಾರರ ವಿರುದ್ಧ ಹೋರಾಡಿದರು. ರೈತರು ತಮ್ಮ ಭೂಮಿಯನ್ನು ಹಿಂಪಡೆಯುವ ಹೋರಾಟ ರೂಪಿಸಿದರು. ರೈತರಿಗೆ ಯಶಸ್ಸು ತಂದುಕೊಟ್ಟರು. ಅದರ ಮೂಲಕ ಅವರು ಜಗತ್ತಿನ ಧೀಮಂತರ ಸಾಲಿಗೆ ಸೇರಿದರು. ಇಂದಿನ ರಾಜಕಾರಣಿಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ.
ಇನಾಮದಾರಿಕೆ ಎಂದರೆ ಏನು ಎಂಬುದನ್ನು ಹೇಳಲು ಅವರು ಭಯಪಡುತ್ತಿರುವಂತೆ ಕಾಣುತ್ತದೆ. ಇನಾಮದಾರರು ಭೂಮಿಯ ಮಾಲೀಕರಲ್ಲ. ಅವರು ಕೇವಲ ತೇಪೆದಾರಿಕೆಯವರು ಎಂದು ಹೇಳಲು ಕೂಡ ಕೆಲವರು ಹಿಂಜರಿಯುತ್ತಿದ್ದಾರೆ. ಏಕೆಂದರೆ ಇಂದಿನ ರಾಜಕೀಯ ಪಕ್ಷಗಳೆಲ್ಲ ಕಾರ್ಪೊರೇಟೀಕರಣದ ಹೆಸರಿನಲ್ಲಿ ಹೊಸ ಆರ್ಥಿಕ ನೀತಿಗಳನ್ನು ಪ್ರತಿಪಾದಿಸುತ್ತಿವೆ. ಆ ನೀತಿಗಳ ಪರಿಣಾಮ ರೈತರು ಮತ್ತು ಶ್ರಮಜೀವಿಗಳು ಮತ್ತೆ ಉತ್ಪಾದಕ ಜೀತದಾಳುಗಳಾಗುವ ಅಪಾಯವಿದೆ. ಇದು ನಮ್ಮ ಆತಂಕ.
ಇದರ ಜೊತೆಗೆ ದೇವರು, ದಿಂಡಿರು, ಜಾತಿ, ಧರ್ಮ, ಸ್ವರ್ಗ, ನರಕ, ಕರ್ಮ ಮತ್ತು ಪುನರ್ಜನ್ಮದ ಮೊರೆ ಹೋಗಿ ಜನರನ್ನು ಮಂಗ ಮಾಡುವ ಅದ್ಭುತ ಕಲಾವಿದರೂ ನಮ್ಮ ರಾಜಕಾರಣದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೂಮಿ ಹಕ್ಕಿನ ಪ್ರಶ್ನೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಈ ಆರೋಪಗಳಿಂದ ಹೊರಬರಲು ರಾಜಕಾರಣಿಗಳು ಇನ್ನೇನೂ ಮಾಡಬೇಕಿಲ್ಲ. ಒಂದು ಕೆಲಸ ಮಾಡಲಿ; ಸಂಬಂಧಪಟ್ಟ ಧಾರ್ಮಿಕ ಸಂಸ್ಥೆಗಳು ರೈತರನ್ನು ವಂಚಿಸಿದ ಎಲ್ಲಾ ಭೂ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ. ಇದಕ್ಕಾಗಿ ಯಾರಾದರೂ ಒಬ್ಬ ನೇತಾರ ಮುಂದೆ ಬರಲಿ. ಸಾರ್ವಜನಿಕವಾಗಿ ಈ ವಿಚಾರವನ್ನು ಹೇಳಲಿ. ಕಾರ್ಯಾಚರಣೆಗೆ ಇಳಿಯಲಿ. ಆಗ ಮಾತ್ರ ತೀರ್ಥಹಳ್ಳಿಯಲ್ಲಿ ನೀವು ಇನ್ನೂ ಗೋಪಾಲಗೌಡರನ್ನು ಮತ್ತು ಕಡಿದಾಳು ಮಂಜಪ್ಪನವರನ್ನು ಸಾಯಿಸಿಲ್ಲ ಎಂದು ಜನರು ನಂಬಬಹುದು.
ಏಕೆಂದರೆ ಬಡವರ ಮತ್ತು ರೈತರ ಭೂಮಿಯನ್ನು ಕಸಿಯುವ ಧೈರ್ಯ ಕೆಲವರಿಗೆ ಎಲ್ಲಿಂದ ಬರುತ್ತಿದೆ? ಮನೆಗಳನ್ನು ಅಕ್ರಮ ದಾಖಲೆಗಳ ಮೂಲಕ ಕಸಿಯುವ ಧೈರ್ಯ ಎಲ್ಲಿಂದ ಬರುತ್ತಿದೆ? ಮಠ-ಮಂದಿರಗಳವರಾಗಿರಲಿ. ಚರ್ಚು-ಮಸೀದಿಗಳವರಾಗಿರಲಿ. ಯಾವುದೇ ಧಾರ್ಮಿಕ ಸಂಸ್ಥೆಯಾಗಿರಲಿ. ಇಂತಹ ಸಂಸ್ಥೆಗಳಿಗೆ ಬಂಡ ಧೈರ್ಯ ನೀಡುತ್ತಿರುವ ಮೂಲ ಯಾವುದು? ಕಂದಾಯ ಇಲಾಖೆಯಲ್ಲಿರುವವರ ಪಾತ್ರ ಏನು? ನ್ಯಾಯಾಂಗದಲ್ಲಿ ಯಾವುದೇ ಹುದ್ದೆಯಲ್ಲಿರುವವರ ಪಾತ್ರ ಏನು? ಇಂತಹವರ ಪಾತ್ರಗಳನ್ನು ಬೆತ್ತಲುಗೊಳಿಸುವ ತನಿಖೆ ನಡೆಯಬೇಕು. ಅಂತಹ ತನಿಖೆಗೆ ರಾಜಕೀಯ ಪಕ್ಷಗಳು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬೇಕು.
ಇಂತಹ ಧಾರ್ಮಿಕ ಸಂಸ್ಥೆಗಳ ಸಂವಿಧಾನಕ್ಕೂ ಮೀರಿದ ಸೋ ಕಾಲ್ಡ್ ಸಾಮಾಜಿಕ ಸ್ಥಾನಮಾನಗಳಿಂದ ಬಡ ಜನರ, ರೈತರ ಮತ್ತು ಜನಸಾಮಾನ್ಯರ ಆಸ್ತಿ-ಪಾಸ್ತಿಗಳ ಮೇಲೆ ಭೀಕರ ದಾಳಿಗಳು ನಡೆಯುತ್ತಿದ್ದರೆ ಅವುಗಳನ್ನು ತಡೆಯಬೇಕು. ಇದಕ್ಕೆ ಬೌದ್ಧಿಕ ದಾರಿದ್ರ್ಯದ ರಾಜಕಾರಣಿಗಳೇ ಕಾರಣವಾಗಬಾರದು. ಈಗ ಇವರು ಸಭೆ ನಡೆಸುತ್ತಿದ್ದಾರೆ. ಸಮಾರಂಭ ನಡೆಸುತ್ತಿದ್ದಾರೆ. ಪಾದಯಾತ್ರೆ ಮಾಡುತ್ತಿದ್ದಾರೆ. ನಿಯೋಗ ಹೋಗುವ ನಾಟಕವಾಡುತ್ತಿದ್ದಾರೆ. ಇಂತಹ ಕಣ್ಕಟ್ಟುಗಳ ಮೂಲಕ ಜನರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸುವ ಕೆಲಸ ನಡೆಯಬಾರದು. ಜನರನ್ನು ವಿಕಾಸವಾದಕ್ಕೆ ವಿರುದ್ಧವಾಗಿ ಮಾನವರನ್ನೇ ಮಂಗ ಮಾಡುವ ರೀತಿಯಲ್ಲಿ ನಡೆಸಿಕೊಳ್ಳಬಾರದು. ಪಶ್ಚಿಮ ಘಟ್ಟವು ಪುರಾತನ ನಾಗರಿಕತೆಗಳಲ್ಲಿ ಒಂದಾದ ಪ್ರದೇಶ. ಇಲ್ಲಿನ ಜನರ ಬದುಕು ಬಲಿಯಾಗಬಾರದು. ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಇಲ್ಲಿನ ಜನರನ್ನು ಹೊರಹಾಕಬಾರದು. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿನ ಜನರನ್ನು ನಿರ್ಗತಿಕರನ್ನಾಗಿಸಬಾರದು. ಭೂಮಿ ಹಕ್ಕಿನ ಹೆಸರಿನಲ್ಲಿ ಮತ್ತೆ ಇನಾಮದಾರಿಕೆ, ಜಹಗೀರುದಾರಿಕೆ ಮತ್ತು ಜಮೀನುದಾರಿಕೆ ಪುನರುಜ್ಜೀವನಗೊಳ್ಳಬಾರದು. ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ ರೈತರ ಭೂಮಿಯನ್ನು ಕಸಿಯುವ ವ್ಯವಸ್ಥೆ ಬೆಳೆಯಬಾರದು. ಅಧಿಕಾರಶಾಹಿಯ ಹೆಸರಿನಲ್ಲಿ ರೈತರನ್ನು ಅಪರಾಧಿಗಳಂತೆ ಕಾಣಬಾರದು. ಪರಿಸರವಾದದ ಹೆಸರಿನಲ್ಲಿ ರೈತರನ್ನು ಪ್ರಕೃತಿಯ ಶತ್ರುಗಳಂತೆ ಬಿಂಬಿಸಬಾರದು. ಇವೆಲ್ಲದರ ವಿರುದ್ಧ ಜನರು ಜಾಗರೂಕರಾಗಬೇಕು.
ನಮ್ಮ ಈ ಕಾಳಜಿ ಸತ್ಯಕ್ಕೆ ಹತ್ತಿರವಾಗಿದೆ ಎಂದು ಮಲೆನಾಡಿನ ಯಾರಿಗೆ ಅನಿಸುತ್ತದೆಯೋ, ಅವರು ತಕ್ಷಣ ಜಾಗರೂಕರಾಗಬೇಕು. ಜನರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ತಮ್ಮ ಭೂಮಿಯ ದಾಖಲೆಗಳನ್ನು ತಿಳಿದುಕೊಳ್ಳಬೇಕು. ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಸರ್ಕಾರದ ಅಧಿಸೂಚನೆಗಳನ್ನು ಓದಬೇಕು. ತಮ್ಮ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡಬೇಕು. ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು. ಅಧಿಕಾರಿಗಳನ್ನು ಪ್ರಶ್ನಿಸಬೇಕು. ಮಲೆನಾಡಿನ ಭವಿಷ್ಯದ ಬಗ್ಗೆ ತಾವೇ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಇದೇ ಕರ್ನಾಟಕ ರಾಜ್ಯ ರೈತ ಸಂಘದ ಒತ್ತಾಸೆ.
ವಿಶ್ವಾಸದೊಂದಿಗೆ,
ಕೋಡ್ಲು ವೆಂಕಟೇಶ್, ಅಧ್ಯಕ್ಷರು
ಹೊರಬೈಲು ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ರೈತ ಸಂಘ, ತೀರ್ಥಹಳ್ಳಿ