Ashok G loni English post collection

Ashok G loni  English post collection Tell people more about your page (255 character maximum)

17/09/2025
ನೈತಿಕ ರಾಜಕಾರಣದ ನೆನಪಿನ ರಾಮಕೃಷ್ಣ ಹೆಗಡೆ.ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಾಜ್ಯದ...
29/08/2025

ನೈತಿಕ ರಾಜಕಾರಣದ ನೆನಪಿನ
ರಾಮಕೃಷ್ಣ ಹೆಗಡೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಾಜ್ಯದಲ್ಲಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸಂಪುಟದಲ್ಲಿ ಸಚಿವರಾಗಿ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ, ರಾಜ್ಯಸಭೆಯ ಸದಸ್ಯರಾಗಿ ಸುಮಾರು ೫ ದಶಕಗಳ ಕಾಲ ರಾಜಕಾರಣವನ್ನು ಮಾಡಿದ ರಾಮಕೃಷ್ಣ ಹೆಗಡೆಯವರ ಹೆಸರು ನೈತಿಕ ರಾಜಕಾರಣಕ್ಕಾಗಿ ಇಂದಿಗೂ ನೆನಪಿನಲ್ಲಿ ಉಳಿಯುತ್ತದೆ.

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದಂತಹ ಕುಟುಂಬದವರಾಗಿದ್ದು ಸ್ವತಃ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ವಿನೋಬಾ ಭಾವೆಯವರ ಆಶ್ರಮದಲ್ಲಿ ಸ್ವಯಂ ಸೇವಕರಾಗಿ ದುಡಿದು ಅಪಾರವಾದ ಅನುಭವವನ್ನು ಮತ್ತು ಸಾಮಾಜಿಕ ಜ್ಞಾನವನ್ನು ಪಡೆದುಕೊಂಡಿದ್ದ ರಾಮಕೃಷ್ಣ ಹೆಗಡೆಯವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಸುಮಾರು ೧೮ ತಿಂಗಳುಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿದವರು. ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಹೆಗಡೆಯವರದ್ದು, ಹತ್ತು ಹಲವಾರು ವಿಚಾರಗಳಿಗೆ ಸದಾ ಕಾಲ ರಾಜ್ಯದ ರಾಜಕಾರಣದಲ್ಲಿ ಚರ್ಚಿಸಲ್ಪಡುವ ವ್ಯಕ್ತಿತ್ವವಾಗಿದೆ.

ನೈತಿಕತೆಯ ರಾಜಕಾರಣದ ವಿಚಾರ ಬಂದಾಗ ಇಂದಿನ ರಾಜಕಾರಣಿಗಳಿಗೆ ಅದರ ಅರ್ಥವೇ ತಿಳಿಯುತ್ತಿಲ್ಲ. ಆರೋಪಗಳು ಬಂದಾಗ ಆಪಾದನೆಗಳು ರುಜುವಾತಾದಾಗಲೂ ಸಹ ವಿರೋಧ ಪಕ್ಷದವರ ಕೈವಾಡ, ಇದೊಂದು ರಾಜಕೀಯ ಕುತಂತ್ರ ನಾನು ಯಾವುದೇ ತಪ್ಪು ಮಾಡಿಲ್ಲವೆಂಬ ಸಿದ್ಧಪಡಿಸಿರುವ ಹೇಳಿಕೆಗಳನ್ನು ನೀಡುತ್ತಾ ನೈತಿಕತೆಯನ್ನು ಮರೆತಿರುತ್ತಾರೆ. ೧೯೬೨ರಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಶಾಸಕಾಂಗ ಸಭೆಯಲ್ಲಿ ತಾವು ಬಯಸಿದ ಪಂಚಾಯತ್ ರಾಜ್ ಮಸೂದೆಗೆ ಬೆಂಬಲ ದೊರೆಯದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಗಡೆರವರು ಇಂದಿಗೂ ಮಾದರಿಯಾಗಿದ್ದಾರೆ.

೧೯೭೭ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ನೈತಿಕತೆಯ ಕಾರಣಕ್ಕೆ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿ ಮತ್ತೊಂದು ಬಾರಿ ನೈತಿಕತೆಯನ್ನು ಎತ್ತಿ ಹಿಡಿದರು. ೧೯೮೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಲೋಕಸಭಾ ಸ್ಥಾನಗಳು ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಿ ಮತ್ತೊಮ್ಮೆ ಜನರ ಅಭಿಪ್ರಾಯಕ್ಕಾಗಿ ಅಗ್ನಿಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದರು. ೧೯೮೬ರಲ್ಲಿ ಬಾಟ್ಲಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಕಾರಣಕ್ಕೆ ರಾಜೀನಾಮೆಯನ್ನು ನೀಡಿ ರಾಜಕೀಯ ರಂಗದಲ್ಲಿ ಸಂಚಲನವನ್ನುಂಟು ಮಾಡಿದರು.

೧೯೮೮ರಲ್ಲಿ ಟೆಲಿಫೋನ್ ಕದ್ದಾಲಿಕೆಯ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಲ್ಪಟ್ಟ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಎಷ್ಟೇ ಒತ್ತಡ ಬಂದರೂ ಜಗ್ಗದೆ ರಾಜೀನಾಮೆ ನೀಡಿ ನಿರ್ಗಮಿಸಿದರು. ೧೯೭೯ರಲ್ಲಿ ಕುಲದೀಪ್ ಸಿಂಗ್ ಆಯೋಗದ ಕಾರಣಕ್ಕಾಗಿ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಜೀನಾಮೆ ನೀಡಿದರು. ಹೀಗೆ ನೈತಿಕತೆಯ ಕಾರಣಕ್ಕೆ ಈ ರಾಷ್ಟ್ರದಲ್ಲಿ ರಾಜೀನಾಮೆ ನೀಡಿದಂತಹ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.

ರೈಲ್ವೆ ದುರಂತವೊಂದರಲ್ಲಿ ಕೆಲವು ಮಂದಿ ಸಾವನ್ನಪ್ಪಿದ ಕಾರಣಕ್ಕಾಗಿ ಲಾಲ್‌ಬಹದ್ದೂರು ಶಾಸ್ತ್ರಿಯವರು ರಾಜೀನಾಮೆಯನ್ನು ನೀಡಿದ್ದು ನೈತಿಕತೆಯ ಕಾರಣಕ್ಕಾಗಿ. ವಿ.ಪಿ. ಸಿಂಗ್‌ರವರು ರಾಜೀವ್‌ಗಾಂಧಿ ಸಂಪುಟದಿಂದ ಹೊರಬಂದಿದ್ದು, ನಿಜಲಿಂಗಪ್ಪನವರ ಸಂಪುಟದಲ್ಲಿ ಗೃಹಸಚಿವರಾಗಿದ್ದ ರಾಮರಾವ್‌ರವರು ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ವಿಚಾರದಲ್ಲಿ ತಮ್ಮ ಅಸಹಾಯಕತೆಯನ್ನು ಬೇಸರದಿಂದ ವ್ಯಕ್ತಪಡಿಸಿ ರಾಜೀನಾಮೆಯನ್ನು ನೀಡಿದ್ದು ಕೆಲವೇ ಕೆಲವು ಉದಾಹರಣೆಗಳು. ಇಂದು ಜೈಲಿಗೆ ಹೋದವರು ಮತ್ತೆ ಹೊರಬಂದು ರಾಜಾರೋಷವಾಗಿ ಜನರ ಮುಂದೆ ನಿಲ್ಲುತ್ತಾರೆ. ನ್ಯಾಯಾಲಯಗಳಲ್ಲಿ ಜಾಮೀನನ್ನು ಪಡೆದ ತಕ್ಷಣವೇ ಸಂಭ್ರಮದಿಂದ ಬೀಗುತ್ತಾರೆ.

ತಮ್ಮ ಮೇಲಿನ ಆಪಾದನೆಗಳಿಗೆ ವಿವಿಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಸಿಕ್ಕರೆ ದೊಡ್ಡ ಸಾಧನೆಯೆಂದು ಪ್ರಚಾರ ಪಡೆದುಕೊಳ್ಳುತ್ತಾರೆ. ತಾವು ತಮ್ಮ ಮಕ್ಕಳು ತಮ್ಮ ಕುಟುಂಬದ ಸದಸ್ಯರಿಗಾಗಿ ರಾಜಕಾರಣವನ್ನು ಮಾಡುತ್ತಾ ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಆಯಕಟ್ಟಿನ ಸ್ಥಾನದಲ್ಲಿ ಕೂಡಿಸಲು ಹರಸಾಹಸ ಮಾಡುತ್ತಾರೆ. ಈ ವಿಚಾರದಲ್ಲೂ ಸಹ ಹೆಗಡೆ ದೊಡ್ಡತನವನ್ನು ಮೆರೆದಿದ್ದಾರೆ. ತಾವು ಬದುಕಿರುವ ತನಕ ತಮ್ಮ ಕುಟುಂಬದ ಯಾವೊಬ್ಬ ಸದಸ್ಯನನ್ನೂ ಸಕ್ರಿಯ ರಾಜಕಾರಣಕ್ಕೆ ಬಾರದಂತೆ ತಡೆದು ಜೆ.ಪಿ.ಯವರ ಆಶಯಕ್ಕೆ ತಕ್ಕ ಹಾಗೆ ನಡೆದುಕೊಂಡರು. ತಮ್ಮ ಕುಟುಂಬದ ಸದಸ್ಯರ ಮೇಲೆ ಆರೋಪಗಳು ಬಂದಾಗ ಕೂಡಲೇ ನ್ಯಾಯಾಂಗ ತನಿಖೆಗಳ ಮೂಲಕ ತನಿಖೆಯನ್ನು ನಡೆಸಿ ತಮ್ಮ ವೌಲ್ಯಗಳನ್ನು ಎತ್ತಿ ಹಿಡಿದರು.

ಲೋಕಾಯುಕ್ತರ ವ್ಯವಸ್ಥೆಯ ಸ್ಥಾಪನೆ, ಗ್ರಾಮೀಣ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ವ್ಯವಸ್ಥೆ, ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗೆ ಉಚಿತ ಬಸ್‌ಪಾಸ್‌ಗಳ ವ್ಯವಸ್ಥೆ, ವಿಧವಾ ಪಿಂಚಣೆ, ಎರಡು ರೂಪಾಯಿ ದರದಲ್ಲಿ ಅಕ್ಕಿ, ಗಂಗಾಕಲ್ಯಾಣ ಯೋಜನೆ, ಅಂತ್ಯೋದಯ ಕಾರ್ಯಕ್ರಮ, ನಗರ ಪ್ರದಕ್ಷಿಣೆ, ಕಟ್ಟುನಿಟ್ಟಿನ ಜನತಾದರ್ಶನದ ಕಾರ್ಯಕ್ರಮ, ಅಂಗರಕ್ಷಕರಿಲ್ಲದ ಬೆಂಗಾವಲು ಪಡೆಗಳ ಹಿಂಡಿಲ್ಲದ ನಾಯಕರಾಗಿ ಜನಮನದಲ್ಲಿ ಇಂದಿಗೂ ಉಳಿದಿರುವ ಹೆಗಡೆಯವರಿಗೆ ಇಂದು (೨೯.೮.೨೦೧೭) ೯೦ ವರ್ಷದ ಹುಟ್ಟುಹಬ್ಬವಾಗಿರುತ್ತದೆ. ಹೆಗಡೆಯವರು ಇಲ್ಲವಾಗಿ ಸುಮಾರು ೧೩ ವರ್ಷಗಳು ಕಳೆದರೂ ಇಂದೂ ಸಹ ದೃಶ್ಯ ಮಾಧ್ಯಮಗಳಲ್ಲಿ ರಾಜಕೀಯ ವಿಚಾರಗಳ ವಿಶ್ಲೇಷಣೆ ಸಂದರ್ಭದಲ್ಲಿ ವಿಶ್ಲೇಷಣೆ ಮಾಡಲು ಆಸೀನರಾಗುವ ರಾಜಕೀಯ ವಿಮರ್ಶಕರುಗಳು ಒಂದಲ್ಲ ಒಂದು ಒಳ್ಳೆಯ ಕಾರಣಗಳಿಗಾಗಿ ಹೆಗಡೆಯವರ ಹೆಸರನ್ನು ಪ್ರಸ್ತಾಪಿಸುತ್ತಲೇ ಇರುತ್ತಾರೆ.

ನಿಜವಾದ ಜನನಾಯಕರೆಂದರೆ ಸತ್ತ ನಂತರವೂ ಜನರ ನೆನಪಿನಲ್ಲಿರುವ ನಿಜವಾದ ಜನನಾಯಕ. ನಿಜವಾದಂತಹ ಜಾತ್ಯತೀತರು ಯಾರು ಎನ್ನುವ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಹೆಗಡೆಯವರ ಬದುಕನ್ನು ಹತ್ತಿರದಿಂದ ಕಂಡವರಿಗೆ, ಅವರ ನಿರ್ಧಾರಗಳನ್ನು ಅರಿತವರಿಗೆ ನಿಜವಾದ ಜಾತ್ಯತೀತ ನಾಯಕರೆಂದರೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ಕೆ.ಎಸ್. ನಾಗರಾಜ್
ವಾರ್ತಾಭಾರತಿ

29/08/2025

Address

Bangalore

Website

Alerts

Be the first to know and let us send you an email when Ashok G loni English post collection posts news and promotions. Your email address will not be used for any other purpose, and you can unsubscribe at any time.

Share

Category