02/04/2022
ಸರ್ವರಿಗೂ ಸನ್ಮಂಗಳವನ್ನು ತರಲಿ ಯುಗಾದಿ!!
ಯುಗಾದಿ... ಹೆಸರೇ ಹೇಳುವಂತೆ ಯುಗದ ಆದಿ. ಭಾರತದಲ್ಲಿ ಆಚರಿಸಲ್ಪಡುವ ದೊಡ್ಡ ಹಬ್ಬಗಳಲ್ಲಿ ಯುಗಾದಿ ಕೂಡಾ ಒಂದು. ಯುಗಾದಿ ಎಂದರೆ ಹೊಸತನದ ಆರಂಭ. ಹೀಗಾಗಿ, ಹಿಂದೂ ಧರ್ಮೀಯರು ಯುಗಾದಿಯನ್ನೇ ಹೊಸ ವರ್ಷ ಎಂದೂ ಆಚರಿಸುತ್ತಾರೆ. ಬ್ರಹ್ಮ ದೇವರು ಈ ದಿನದಂದು ಜಗತ್ತನ್ನು ಸೃಷ್ಟಿಸಿದ್ದಾಗಿ ನಂಬಿಕೆ. ಇದೇ ಕಾರಣದಿಂದ ಯುಗಾದಿಯನ್ನು ಹಿಂದೂ ಪಂಚಾಂಗದ ಮೊದಲ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 2 ರಂದು ಯುಗಾದಿಯನ್ನು ಆಚರಿಸಲಾಗುತ್ತಿದೆ. ಸದ್ಯ ಪ್ಲವ ನಾಮ ಸಂವತ್ಸರ ಮುಗಿದು ಶುಭಕೃತ್ ನಾಮ ಸಂವತ್ಸರದ ಆರಂಭವಾಗಲಿದೆ.
ಈ ದಿನ ಬೇವು ಬೆಲ್ಲ ಸವಿದು ಜನ ಹಬ್ಬವನ್ನು ಆಚರಿಸುತ್ತಾರೆ. ಇದು ಅದ್ಭುತ ಜೀವನ ಸಂದೇಶವನ್ನು ತಿಳಿಸುವ ಹಬ್ಬವೂ ಹೌದು. ಬದುಕು ಎಂದರೆ ಮೇಲೆ ಸಿಹಿ ಕಹಿ ಸಾಮಾನ್ಯ ಮತ್ತು ಇದನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಅಪೂರ್ವ ಜೀವನ ಸಂದೇಶವನ್ನು ಈ ಹಬ್ಬದ ಮೂಲಕ ನಮ್ಮ ಹಿರಿಯರು ಸೂಚ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿವರ್ಷ ಜನರು ಬಹಳ ಶ್ರದ್ಧಾ ಭಕ್ತಿಯಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಇಂತಹ ಖುಷಿಯ ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವ ಕೆಲ ಶುಭಾಶಯದ ಸಂದೇಶಗಳು ಇಲ್ಲಿವೆ.
ಯುಗಾದಿ ಹಬ್ಬದ ಶುಭಾಶಯಗಳು
* ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
* ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು
* ಯುಗಾದಿಯ ಖುಷಿ ನಿಮ್ಮ ಜೀವನದಲ್ಲಿ ಹೊಳಪು ಮತ್ತು ನೆಮ್ಮದಿಯನ್ನು ತುಂಬಲಿ ಎಂಬ ಹಾರೈಕೆ ನನ್ನದು. ನಿಮಗೆ ಹಬ್ಬದ ಶುಭಾಶಯಗಳು
* ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
* ಈ ಯುಗಾದಿ ನಿಮ್ಮ ಬದುಕಿನ ಕಷ್ಟಗಳೆಂಬ ಕತ್ತಲೆಯನ್ನು ಹೋಗಲಾಡಿಸಿ ನಿಮ್ಮ ಜೀವನ ಪ್ರಕಾಶಿಸುವಂತೆ ಮಾಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
* ಬದುಕಿನ ಎಲ್ಲಾ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರ ಹಾರ್ದಿಕ ಶುಭಾಶಯಗಳು
* ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನ ಖುಷಿ ಅನುಭವಿಸಿ. ಎಲ್ಲರಿಗೂ ಶುಭವ ತರಲಿ ಯುಗಾದಿ
* ಈ ಖುಷಿಯ ಹಬ್ಬವು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲಿ. ನಿಮ್ಮ ಸಾಧನೆಯ ಹಾದಿ ಸುಗಮವಾಗಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು
* ಈ ಹೊಸ ವರ್ಷವು ನಿಮ್ಮ ಪಾಲಿಗೆ ಅದ್ಭುತವಾಗಿ ಆರಂಭವಾಗಲಿ. ಯುಗದ ಆದಿ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ. ಯುಗಾದಿ ಹಬ್ಬದ ಶುಭಾಶಯಗಳು
* ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು
* ಈ ಪವಿತ್ರ ಹಬ್ಬವು ಹೊಸ ಭರವಸೆ, ಹೊಸ ಕನಸು, ಹೊಸ ಸಾಧನೆಗೆ ನಾಂದಿಯಾಗಲಿ. ಯುಗದ ಆದಿ ನಿಮ್ಮ ಬದುಕಿನಲ್ಲಿ ಬರೀ ಖುಷಿಯನ್ನೇ ತುಂಬುವಂತೆ ಮಾಡಲಿ. ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು!!