21/08/2026
*ಮುಸ್ಲಿಂ ಸಮುದಾಯ ಬಂಧುಗಳೇ, ಈ ಬಾರಿಯ ಈದ್ ಮಿಲಾದ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರಲಿ*
==========================
*1* ಮೆರವಣಿಗೆಗಳು ಸಾರ್ವಜನಿಕರಿಗೆ ತೊಂದರೆಯನ್ನು ಮಾಡದೆ ಶಾಂತಿಯುತವಾಗಿರುವಂತೆ ಮತ್ತು ಇತರರು ಮೆಚ್ಚುವ ರೀತಿಯ ಶಿಸ್ತುಬದ್ಧವಾಗಿ ವ್ಯವಸ್ಥೆಯಾಗಲಿ..
*2* ಆಡುವ ಮಾತುಗಳು, ಕೂಗುವ ಘೋಷಣೆಗಳು, ಹಿಡಿಯುವ ಫಲಕಗಳು ಮತ್ತು ನಡತೆಯು ಮಹಾನ್ ಪ್ರವಾದಿಯ ಘನತೆಯನ್ನು ಎತ್ತರಿಸುವಂತಿರಲಿ..
*3* ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ವ್ಯಕ್ತಿಗಳ ಪರ-ವಿರುದ್ಧ ಘೋಷಣೆಯನ್ನು ಕೂಗದಿರಿ..
*4* ಉದ್ರೇಕಕಾರಿ ಫಲಕ, ಭಾಷಣ, ಬೊಬ್ಬೆಗಳು ಹೆಚ್ಚಾಗಿದ್ದಲ್ಲಿ ಅಂತಹ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಿ,,
*5* ಕೈಗಳಲ್ಲಿ ಪ್ರವಾದಿಯವರು ಮಹಿಳೆಯರಿಗೆ, ಕರಿಯರಿಗೆ, ಅನಾಥರಿಗೆ, ಶೋಷಿತರಿಗೆ ನೀಡಿದ ಸವಲತ್ತುಗಳ ಮಾಹಿತಿ ಇರುವ ಹದೀಸುಗಳ ಫಲಕಗಳಿರಲಿ,,
*6* ಕೋಮು ಸೌಹಾರ್ಧಕ್ಕೆ ಪೂರಕವಾಗುವ ಪ್ರವಾದಿ ವಚನಗಳ ಪರಿಚಯವಾಗಲಿ
*7* ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಮಸೀದಿ ಅಥವಾ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನ್ಯ ಧರ್ಮದ ಅತಿಥಿಗಳನ್ನು ಆಹ್ವಾನಿಸಿರಿ,,
*8* ಊಟೋಪಚಾರ ಮತ್ತು ಇತರ ಸತ್ಕಾರಗಳಲ್ಲಿ ಸಹಧರ್ಮಿಯರನ್ನು ಕೂಡ ಸೇರಿಸಿಕೊಳ್ಳಿ,,
*9* ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಗಳಲ್ಲಿ, ಪ್ರವಾದಿಯ ಜೀವನ, ತತ್ತ್ವ, ಆದರ್ಶಗಳ ಪರಿಚಯವಾಗಲಿ,,
*10* ಪವಿತ್ರ ಕುರ್ ಆನ್ ಸೂಕ್ತಗಳು, ಹದೀತ್ ವಾಣಿಗಳು ಮತ್ತು ಪ್ರವಾದಿಯವರ ಜೀವನದ ಕುರಿತಾಗಿ ಈ ವರ್ಷ ಧರ್ಮವಿರೋಧಿ ಶಕ್ತಿಗಳಿಂದ ಪ್ರಶ್ನಿಸಲ್ಪಟ್ಟ ಮತ್ತು ತಿರುಚಲ್ಪಟ್ಟ ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸಿ ಸಹಧರ್ಮಿಯರಿಗೆ ಈ ಕುರಿತಾಗಿ ಸೂಕ್ತ ತಿಳುವಳಿಕೆಯನ್ನು ನೀಡಿರಿ,,
*11* ಕಾರ್ಯಕ್ರಮಗಳಲ್ಲಿ ಯಾವುದೇ ಆಯುಧಗಳ ಅಣಕನ್ನು ಪ್ರದರ್ಶಿಸುವುದು ಅಥವ ವಿವಾದಿತ ರಾಜಕೀಯ ಧಾರ್ಮಿಕ-ವ್ಯಕ್ತಿತ್ವಗಳನ್ನು ವೈಭವೀಕರಿಸುವುದನ್ನು ಮಾಡಬೇಡಿ,,
*12* ಉದ್ರೇಕಕಾರಿ ಘೋಷಣೆಗಳು, ಭಾಷಣಗಳು, ಆಯುಧಗಳ ಅಣಕು ಪ್ರದರ್ಶನಗಳು, ವಿವಾದಿತ ವ್ಯಕ್ತಿಗಳ ವೈಭವಿಕರಣವು ಕೋಮು ಶಕ್ತಿಗಳಿಗೆ ಚುನಾವಣಾ ಲಾಭ ತರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರಲಿ,,
*13* ಕಾರ್ಯಕ್ರಮ ಮತ್ತು ಮೆರವಣಿಗೆಗಳಲ್ಲಿ ಸಂಭವಿಸುವ ಎಡವಟ್ಟುಗಳಿಂದ ಕೋಮಶಕ್ತಿಗಳು ಪ್ರಯೋಜನ ಪಡೆದು ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತವೆ ಎನ್ನುವುದನ್ನು ಮರೆಯದಿರಿ,,
*14* ಸಾರ್ವಜನಿಕವಾಗಿ ಮುಸ್ಲಿಮರು ತಪ್ಪು ಮಾಡುವುದನ್ನು ಕಾಯುತ್ತಿರುವ ಮತ್ತು ಅದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುವ ದೊಡ್ಡ ಜಾಲವೇ ಇದೆ ಎಂಬ ಎಚ್ಚರಿಕೆ ನಿಮಗಿರಲಿ,,
*15* ಕೆಲವು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಕೂಗುವ ಉದ್ರೇಕಕಾರಿ ಘೋಷಣೆಗಳು, ಫಲಕಗಳು, ಉನ್ಮಾದದಿಂದ ಕೂಡಿದ ವೈಭವಿಕರಣಗಳಿಂದಾಗಿ ಸಮಸ್ತ ಮುಸ್ಲಿಂ ಸಮುದಾಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೊಂದರೆಗೀಡಾಗುತ್ತದೆ ಎನ್ನುವ ಪ್ರಜ್ಞೆ ಎಲ್ಲರಲ್ಲೂ ಇರಲಿ,,
*16* ವರ್ಷದ ಎಲ್ಲ ದಿನಗಳಲ್ಲಿಯೂ ಉರ್ದು, ಬ್ಯಾರಿ ಮತ್ತು ನವಾಯಿತಿಯಂತಹ ಮಾತೃಭಾಷೆಗಳಲ್ಲಿ ಪ್ರವಚನ ಕೇಳುತ್ತೇವೆ,, ಕನಿಷ್ಠ ಪ್ರವಾದಿ ದಿನಾಚರಣೆಯಲ್ಲಿ ನಾಡ ಭಾಷೆಯಾದ ಕನ್ನಡದಲ್ಲಿ ಧಾರ್ಮಿಕ ಪ್ರವಚನವಿರಲಿ..
*17* ಸಮಾಜದಲ್ಲಿ ಬಡವರು, ರೋಗಿಗಳು, ಶಿಕ್ಷಣ ವಂಚಿತರು, ಸಾಲಗಾರರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ, ಕಾರ್ಯಕ್ರಮಗಳಲ್ಲಿ ಆಹಾರ, ಬಟ್ಟೆ ಮತ್ತು ಅಲಂಕಾರಗಳಲ್ಲಿ ಯಾವುದೇ ದುಂದು ವೆಚ್ಚಗಳನ್ನು ಮಾಡದೆ ಅದಕ್ಕೆ ವ್ಯಯಿಸುವ ಹಣವನ್ನು ಮೇಲಿನ ವರ್ಗಗಳಿಗೆ ನೀಡಿರಿ..
ಈ ಬಾರಿಯ ಈದ್ ಮಿಲಾದ್ ಮನುಕುಲದ ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ರವರ ತತ್ವ- ಸಂದೇಶಗಳ ಅರಿವು ಮತ್ತು ಪ್ರಸರಣಕ್ಕೆ ಪೂರಕವಾಗಿ ಸೌಹಾರ್ದಯುತ ಮತ್ತು ಶಾಂತಿಯುತವಾಗಿರಲಿ..
============================
*ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ*