15/08/2026
ಪರ್ಲ್ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಅತಿಥಿಯಿಂದ ಧ್ವಜಾರೋಹಣ ..
ಪರ್ಲ್ ಪಬ್ಲಿಕ್ ಸಿಬಿಎಸ್ಇ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ಭಾವನೆಯೊಂದಿಗೆ ಆಚರಿಸಲಾಯಿತು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆಯೆಂದರೆ, ಕಳೆದ 15 ವರ್ಷಗಳಿಂದ ನಮ್ಮ ಶಾಲೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಕರ್ತವ್ಯಪ್ರಜ್ಞೆಯಿಂದ ಸೆಕ್ಯುರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಹರಬ್ಬಿ ಕೆಂಚಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಶ್ರೀ ಹರಬ್ಬಿ ಕೆಂಚಪ್ಪ ಅವರು ಕಳೆದ 15 ವರ್ಷಗಳಿಂದ ಶಾಲೆಯ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಸುರಕ್ಷತೆ ಮತ್ತು ಶಿಸ್ತು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವ ಅವರು ತಮ್ಮ ಕರ್ತವ್ಯವನ್ನು ಸದಾ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಅವರ ಸುದೀರ್ಘ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಗೌರವವನ್ನು ಅವರಿಗೆ ನೀಡಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ ಶಾಲಾ ಆವರಣದಲ್ಲಿ ನಡೆಯಿತು. ಶಾಲೆಯ ಅಧ್ಯಕ್ಷರು ಶ್ರೀ ನಾಗೇಶ್ ಉಪ್ಪಿನ್ ಸೇರಿದಂತೆ ಎಲ್ಲಾ ಆಡಳಿತ ಮಂಡಳಿಯವರು ಪ್ರಾಚಾರ್ಯರು , ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಶ್ರೀ ಹರಬ್ಬಿ ಕೆಂಚಪ್ಪ ಅವರು ಧ್ವಜಾರೋಹಣದ ಗೌರವವನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯ ವತಿಯಿಂದ ದೊರೆತ ಈ ಗೌರವ ತಮ್ಮ ಜೀವನದ ಸ್ಮರಣೀಯ ಕ್ಷಣವಾಗಿದೆ ಎಂದು ತಿಳಿಸಿದರು. 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವ ಭಾಗ್ಯ ನನಗೆ ಸಿಕ್ಕಿದೆ ಏಕೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕ ಗಣ್ಯರು ಧ್ವಜಾರೋಹಣವನ್ನು ನೆರವೇರಿಸಿದ್ದಾರೆ.ಆದರೆ ಈ ಬಾರಿ ನನ್ನ ಅದೃಷ್ಟ ನಮ್ಮ ಪ್ರಕೃತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಹಾಗೂ ಎಲ್ಲಾ ಆಡಳಿತ ಮಂಡಳಿಯವರು ಭಾರತದ ಪ್ರತಿಯೊಬ್ಬ ಪ್ರಜೆಗೂ ಧ್ವಜಾರೋಹಣ ಮಾಡುವ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಾಮಾನ್ಯ ಕೆಲಸದವನಾದ ನನಗೂ ಧ್ವಜಾರೋಹಣ ಮಾಡುವ ಅವಕಾಶ ನೀಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕೃತಿ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಶ್ರೀ ಚನ್ನೇಶ ಬಣಕಾರ್ ಮಾತನಾಡಿ, “ಶಾಲೆಯ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ 15 ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಹರಬ್ಬಿ ಕೆಂಚಪ್ಪ ಅವರ ಸೇವೆ ಶ್ಲಾಘನೀಯ. ಅವರಿಗೆ ಧ್ವಜಾರೋಹಣದ ಗೌರವ ನೀಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು. ಅವರ ಸೇವೆ ವಿದ್ಯಾರ್ಥಿಗಳಿಗೆ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸುವ ಉತ್ತಮ ಮಾದರಿಯಾಗಿದೆ.
ಧ್ವಜಾರೋಹಣದ ಗೌರವ ನೀಡಿರುವುದು ಅವರ ಸೇವೆಗೆ ಸಲ್ಲಿಸಿದ ಯೋಗ್ಯ ಗೌರವವಾಗಿದ್ದು, ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ “ಕರ್ತವ್ಯವೇ ದೇಶಸೇವೆ” ಎಂಬ ಉತ್ತಮ ಸಂದೇಶವನ್ನು ಮೂಡಿಸಿತು.
ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಭಾಷಣಗಳು, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ದೇಶದ ಸ್ವಾತಂತ್ರ್ಯದ ಮಹತ್ವ ಹಾಗೂ ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಏಕತೆ ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಸಂದೇಶವನ್ನು ನೀಡಲಾಯಿತು.