19/07/2022
ರೋಟರಿ ಹೊಸಕೋಟೆ ಸೆಂಟ್ರಲ್ ನೂತನ ಅಧ್ಯಕ್ಷರಾಗಿ ಎಂ ಲಕ್ಷ್ಮಣ್ ಗೌಡ
ಜವಾಬ್ದಾರಿಯನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ನಿರ್ವಹಿಸುವೆ
ಹೊಸಕೋಟೆ
ಕಳೆದ ಒಂದು ದಶಕದಿಂದ ತಾವು ಹೊಸಕೋಟೆ ರೋಟರಿ ಸೆಂಟ್ರಲ್ ನಲ್ಲಿ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಈ ಹಿನ್ನೆಲೆ ಯಲ್ಲಿ 2022-23ರ ಅವಧಿಗೆ ಹೊಸಕೋಟೆ ರೋಟರಿ ಸೆಂಟ್ರಲ್ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿದ್ದು, ಇವರುಗಳು ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ನೂತನ ರೋಟರಿ ಅಧ್ಯಕ್ಷ ಎಂ ಲಕ್ಷ್ಮಣ್ ಗೌಡರು ಭರವಸೆ ನೀಡಿದರು.
ಸೋಮವಾರ ಹೊಸಕೋಟೆಯ ಪಟೇಲ್ ನಾರಾಯಣಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಕೇಂದ್ರಬಿಂದುವಾಗಿ ಮಾತನಾಡುತ್ತಾ ತಾವು ಹಲವಾರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅದೇ ರೀತಿ ಮುಂಬರುವ ದಿನಗಳಲ್ಲಿ ರೋಟರಿ ಮತ್ತು ಎಲ್.ಜಿ. ಫೌಂಡೇಶನ್ ವತಿಯಿಂದ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ತಾವು ಸಿದ್ಧತೆ ನಡೆಸಿದ್ದು, ಅದರಂತೆ ಹೊಸಕೋಟೆ ನಗರದಲ್ಲಿ ಅವಶ್ಯವಿರುವ ಶೌಚಾಲಯಗಳು ತಂಗುದಾಣಗಳು, ಅಂಗವಿಕಲರಿಗೆ ತ್ರಿಚಕ್ರ ವಾಹನಗಳು, ಪರಿಸರ ಸಂರಕ್ಷಣೆಗಾಗಿ ಗಿಡ ನೀಡುವಿಕೆ, ಇನ್ನು ಹತ್ತಾರು ಯೋಜನೆಗಳು ತಮ್ಮ ಜೋಳಿಗೆಯಲ್ಲಿದ್ದು, ಎಲ್ಲರ ಸಹಕಾರ ಮತ್ತು ಪರಿಶ್ರಮದೊಂದಿಗೆ ತಾವು ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ವಿಜಯ್ ಕುಮಾರ್, ತಾವು ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಕರೋನಾ ಸಂದರ್ಭದಲ್ಲಿಯೂ ಸಹ ತಾವು ತಮ್ಮ ಕೈಲಾದ ಮಟ್ಟಿಗೆ ಸೇವೆಯನ್ನು ಸಲ್ಲಿಸಿದ್ದು ಈಗ ಉತ್ಸಾಹಿ ಲಕ್ಷ್ಮಣ್ ಗೌಡರು ಅಧ್ಯಕ್ಷರಾಗಿರುವುದು ತಮಗೆ ಸಂತಸ ತಂದಿದೆ ಅವರ ಜೊತೆ ತಾವು ಕೈಜೋಡಿಸಿ ರೋಟರಿ ಸೆಂಟ್ರಲ್ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪಿಡಿಜಿ ರೊಟೇರಿಯನ್ ಕೆಪಿ ನಾಗೇಶ್, ಡಿ ಜಿ ಎನ್ ಸತೀಶ್ ಮಾಧವನ್, ಕೋಲಾರ ಜೋನ್ ಗೌರ್ನರ್ ಅ.ಮು. ಲಕ್ಷ್ಮೀನಾರಾಯಣ್, ಚಿತ್ತೂರು ಜೋನ್ ಗೌರ್ನರ್ ರವೀಂದ್ರನಾಥ್, ಅಸಿಸ್ಟೆಂಟ್ ಗೌರ್ನರ್ ನಾಗಶೇಖರ್, ಶಿವಮೂರ್ತಿ, 2022 23ರ ಸಾಲಿನ ಕಾರ್ಯದರ್ಶಿ ವಿ ಸುರೇಶ್ ನಿರ್ದೇಶಕರುಗಳಾದ RTC ಗೋವಿಂದರಾಜು, ಖಜಾಂಚಿ ಭದ್ರಾಚಲ, ನಿಕಟ ಪೂರ್ವ ಕಾರ್ಯದರ್ಶಿ ಡಿಎಸ್ ರಾಜಕುಮಾರ್, ಮಹಿಳಾ ನಿರ್ದೇಶಕರುಗಳಾದ ಶ್ರೀಮತಿ ಲತಾ ಲಕ್ಷ್ಮಣ್ ಗೌಡ್ರು ಇನ್ನು ಮುಂತಾದವರು ಉಪಸ್ಥಿತರಿದ್ದರು.