17/08/2026
ಪತ್ರಿಕಾ ಪ್ರಕಟಣೆ
ಗ್ಯಾರಂಟಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ದಾಖಲೆಗಳ ಕಡಿವಾಣ: ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್‌ಗಳು – ಎಸ್‌ಡಿಪಿಐ ಆರೋಪ
ಹುಬ್ಬಳ್ಳಿ, 17 ಆಗಸ್ಟ್ 2026: ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಗೌರವಯುತವಾಗಿ ತಲುಪಬೇಕಿದ್ದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಅನಗತ್ಯ ದಾಖಲೆಗಳು ಮತ್ತು ಅವೈಜ್ಞಾನಿಕ ಆದಾಯ ಮಿತಿಗಳ ಮೂಲಕ ದುಸ್ತರಗೊಳಿಸಲಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಆರೋಪಿಸಿದೆ.
ಎಸ್‌ಡಿಪಿಐ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಾಯಕರು, ಗ್ಯಾರಂಟಿ ಯೋಜನೆಗಳು ಆರಂಭದಲ್ಲಿ ಜನರಲ್ಲಿ ಆಶಾಭಾವನೆ ಮೂಡಿಸಿದ್ದರೂ, ಅವುಗಳ ಅನುಷ್ಠಾನದಲ್ಲಿನ ಆಡಳಿತಾತ್ಮಕ ವೈಫಲ್ಯ, ವಿಳಂಬ ಹಾಗೂ ಅನಗತ್ಯ ನಿರ್ಬಂಧಗಳಿಂದ ಬಡ ಮತ್ತು ದುರ್ಬಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆ: ಈಗಾಗಲೇ ಸರ್ಕಾರದ ದಾಖಲೆಗಳಲ್ಲಿ ಅರ್ಹರೆಂದು ಗುರುತಿಸಲ್ಪಟ್ಟಿರುವ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿರುವುದು ಅನಗತ್ಯ ಕಿರುಕುಳವಾಗಿದೆ. ಮರುದಾಖಲೀಕರಣದ ಹೆಸರಿನಲ್ಲಿ ಫಲಾನುಭವಿಗಳನ್ನು ಕಚೇರಿಗಳಿಗೆ ಅಲೆದಾಡಿಸುವ ಬದಲು, ಸರ್ಕಾರದ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಅರ್ಹರಿಗೆ ಯೋಜನೆಯ ಪ್ರಯೋಜನ ಮುಂದುವರಿಸಬೇಕು ಎಂದು SDPI ಆಗ್ರಹಿಸಿತು.
ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಪ್ರತಿ ತಿಂಗಳು ನಿಯಮಿತವಾಗಿ ಹಣ ಜಮೆಯಾಗದೆ, ಹಲವು ತಿಂಗಳ ಬಾಕಿಯನ್ನು ಒಮ್ಮೆಲೇ ಪಾವತಿಸುವುದು ಹಾಗೂ ಹಣ ಯಾವಾಗ ಜಮೆಯಾಗುತ್ತದೆ ಎಂಬ ಅನಿಶ್ಚಿತತೆ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಮಾಸಿಕ ಹಣ ಜಮೆಯಾಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಶಕ್ತಿ ಯೋಜನೆ: ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸಿದರೂ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸದಿರುವುದರಿಂದ ತುಂಬಿ ತುಳುಕುವ ಬಸ್‌ಗಳಲ್ಲಿ ಮಹಿಳೆಯರು ಅಪಾಯಕಾರಿಯಾಗಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯೋಜನೆ ಪರಿಣಾಮಕಾರಿಯಾಗಲು ರಾಜ್ಯದಾದ್ಯಂತ ಅಗತ್ಯ ಸಂಖ್ಯೆಯ ಹೊಸ ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದು SDPI ಒತ್ತಾಯಿಸಿತು.
ಸಾಮಾಜಿಕ ಭದ್ರತಾ ಪಿಂಚಣಿ: ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ನಿರ್ಗತಿಕರಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಗೆ ಹೊಸದಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರುವುದು ಸಾವಿರಾರು ಬಡ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕುಟುಂಬದ ವಾರ್ಷಿಕ ಆದಾಯ ₹32,000 ಮೀರಬಾರದು ಎಂಬ ಷರತ್ತು ಇಂದಿನ ಜೀವನ ವೆಚ್ಚದ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಮತ್ತು ಅಸಂಗತವಾಗಿದೆ ಎಂದು ಪಕ್ಷವು ತಿಳಿಸಿತು.
ಒಂದೆಡೆ ರಾಜ್ಯ ಸರ್ಕಾರವೇ ಬಿಪಿಎಲ್ ಕಾರ್ಡ್‌ಗೆ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿರುವಾಗ, ಮತ್ತೊಂದೆಡೆ ವಯೋವೃದ್ಧರು, ವಿಧವೆಯರು, ಅಂಗವಿಕಲರು ಮತ್ತು ನಿರ್ಗತಿಕರ ಪಿಂಚಣಿಗೆ ₹32,000 ಎಂಬ ಆದಾಯ ಮಿತಿಯನ್ನು ಮುಂದುವರಿಸುತ್ತಿರುವುದು ಯಾವ ನ್ಯಾಯ ಎಂದು SDPI ಹುಬ್ಬಳ್ಳಿ–ಧಾರವಾಡ ಜಿಲ್ಲಾಧ್ಯಕ್ಷರು, ಸಲೀಂ ಅರಳಿಕಟ್ಟಿ ಪ್ರಶ್ನಿಸಿದರು.
ಕೇರಳದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ ₹1 ಲಕ್ಷದವರೆಗೆ ಕುಟುಂಬ ಆದಾಯ ಮಿತಿ ಹಾಗೂ ತೆಲಂಗಾಣದಲ್ಲಿ ಗ್ರಾಮೀಣ ಪ್ರದೇಶಗಳಿಗೆ ₹2 ಲಕ್ಷ ಮತ್ತು ನಗರ ಪ್ರದೇಶಗಳಿಗೆ ₹3 ಲಕ್ಷದವರೆಗೆ ಆದಾಯ ಮಿತಿಯನ್ನು ಪರಿಗಣಿಸಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಾನದಂಡ ಅಥವಾ ಬಿಪಿಎಲ್ ಆಧಾರವನ್ನು ಬಳಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ₹32,000 ಎಂಬ ಹಳೆಯ ಆದಾಯ ಮಿತಿಯನ್ನು ಮುಂದುವರಿಸುವುದು ಸಾವಿರಾರು ಅರ್ಹ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವಂತಾಗಿದೆ ಎಂದು ಅವರು ಆರೋಪಿಸಿದರು.
SDPI ರಾಜ್ಯ ಸರ್ಕಾರವನ್ನು ಆಗ್ರಹಿಸುವ ಪ್ರಮುಖ ಬೇಡಿಕೆಗಳು:
1. ಸಾಮಾಜಿಕ ಭದ್ರತಾ ಪಿಂಚಣಿಗೆ ವಿಧಿಸಿರುವ ₹32,000 ವಾರ್ಷಿಕ ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಿ, ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು.
2. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಅನಗತ್ಯ ದಾಖಲೆಗಳ ಬೇಡಿಕೆ ಇಲ್ಲದೆ ಪಿಂಚಣಿ ಹಾಗೂ ಇತರೆ ಕಲ್ಯಾಣ ಯೋಜನೆಗಳನ್ನು ಮುಂದುವರಿಸಬೇಕು.
3. ಗೃಹ ಜ್ಯೋತಿ ಯೋಜನೆಯ ಮರುದಾಖಲೀಕರಣ ಪ್ರಕ್ರಿಯೆಯನ್ನು ಕೈಬಿಟ್ಟು, ಈಗಾಗಲೇ ಅರ್ಹರಾಗಿರುವ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
4. ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಹಣ ಜಮೆಯಾಗುವ ವ್ಯವಸ್ಥೆ ಮಾಡಬೇಕು.
5. ಶಕ್ತಿ ಯೋಜನೆ ಪರಿಣಾಮಕಾರಿಯಾಗಲು ರಾಜ್ಯದಾದ್ಯಂತ ಅಗತ್ಯ ಸಂಖ್ಯೆಯ ಹೊಸ ಬಸ್‌ಗಳನ್ನು ರಸ್ತೆಗಿಳಿಸಬೇಕು.
6. ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ಇತರ ದುರ್ಬಲ ವರ್ಗಗಳ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಯಾವುದೇ ನೆಪದಲ್ಲಿ ಸ್ಥಗಿತಗೊಳಿಸದೆ ನಿರಂತರವಾಗಿ ವಿತರಿಸಬೇಕು.
ಬಡವರ ಪರ ಎಂದು ಹೇಳಿಕೊಳ್ಳುವ ಸರ್ಕಾರಗಳು ಭಾಷಣಗಳಲ್ಲಿ ಮಾತ್ರ ಬಡವರ ಬಗ್ಗೆ ಮಾತನಾಡದೆ, ಕಲ್ಯಾಣ ಯೋಜನೆಗಳನ್ನು ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ಜಾರಿಗೊಳಿಸಬೇಕು. ದಾಖಲೆಗಳ ನೆಪದಲ್ಲಿ ಬಡವರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸಿ, ಅವರ ಹಕ್ಕಿನ ಯೋಜನೆಗಳಿಂದ ವಂಚಿಸುವ ಯಾವುದೇ ಪ್ರಯತ್ನವನ್ನು SDPI ತೀವ್ರವಾಗಿ ವಿರೋಧಿಸುತ್ತದೆ.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಪ್ರಮುಖರು:
ರಫೀಕ್ ಲಷ್ಕರ
ಜಿಲ್ಲಾ ಉಪಾಧ್ಯಕ್ಷರು, SDPI ಹುಬ್ಬಳ್ಳಿ–ಧಾರವಾಡ
ಆದಂ ಅತ್ತಾರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ, SDPI ಹುಬ್ಬಳ್ಳಿ–ಧಾರವಾಡ