24/07/2026
ಬರವಣಿಗೆಯ ಮಾಂತ್ರಿಕನಿಗೆ ರವಿ ಬೆಳಗೆರೆ ಪ್ರಶಸ್ತಿ ಕರವೇ ಕುಟುಂಬದ ಹೆಮ್ಮೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ನೀಡುವ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಗಳ ಪಟ್ಟಿಯಲ್ಲಿ, ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಕರವೇ ನಲ್ನುಡಿ ಪ್ರಧಾನ ಸಂಪಾದಕರು ಹಾಗೂ ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕರಾದ ಎಸ್.ಸಿ. ದಿನೇಶ್ ಕುಮಾರ್ ಅವರಿಗೆ ರವಿ ಬೆಳಗೆರೆ ಪ್ರಶಸ್ತಿ ಘೋಷಣೆಯಾಗಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಈ ಗೌರವ ಅವರಿಗೆ ಮಾತ್ರ ಸೀಮಿತವಾಗಿಲ್ಲ; ಕನ್ನಡದ ಪರವಾಗಿ ಪ್ರಾಮಾಣಿಕವಾಗಿ ದುಡಿಯುವ ಪ್ರತಿಯೊಬ್ಬ ಪತ್ರಕರ್ತನಿಗೂ ಸಂದ ಗೌರವವಾಗಿದೆ.
ದಿನೇಶ್ ಕುಮಾರ್ ಅವರೊಂದಿಗಿನ ನನ್ನ ಒಡನಾಟ ಇಂದಿನದ್ದಲ್ಲ. ನಾನು ರಾಜಕುಮಾರ್ ಸಂಘದಲ್ಲಿ ಸಕ್ರಿಯವಾಗಿ ಕನ್ನಡಪರ ಹೋರಾಟಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ಒಂದು ಹೋರಾಟಕ್ಕೆ ಪತ್ರಕರ್ತರನ್ನು ಕಳುಹಿಸುವಂತೆ ಮನವಿ ಮಾಡಲು ಪತ್ರಿಕಾ ಕಚೇರಿಗೆ ಹೋದಾಗ ಮೊದಲ ಬಾರಿಗೆ ದಿನೇಶ್ ಕುಮಾರ್ ಅವರನ್ನು ಭೇಟಿಯಾದೆ. ಆ ಒಂದು ಭೇಟಿಯೇ ಮುಂದೆ ದೀರ್ಘಕಾಲದ ಆತ್ಮೀಯ ಬಾಂಧವ್ಯಕ್ಕೆ ನಾಂದಿಯಾಯಿತು. ಅವರ ಸರಳತೆ, ಪ್ರಾಮಾಣಿಕತೆ, ವೃತ್ತಿಪರ ನಿಷ್ಠೆ ಮತ್ತು ಕನ್ನಡದ ಬಗ್ಗೆ ಇದ್ದ ಅಚಲವಾದ ಕಳಕಳಿ ನನ್ನನ್ನು ಆಕರ್ಷಿಸಿತು. ನಂತರ ಭೇಟಿಯಾದಾಗಲೆಲ್ಲ ಕನ್ನಡ, ಸಮಾಜ, ಪತ್ರಿಕೋದ್ಯಮ ಮತ್ತು ಹೋರಾಟಗಳ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು.
ಬಹಳ ವರ್ಷಗಳ ಹಿಂದೆ, ಕರ್ನಾಟಕ ರಕ್ಷಣಾ ವೇದಿಕೆಗೆ ತನ್ನದೇ ಆದ ಗುಣಮಟ್ಟದ ಕನ್ನಡ ಮಾಸಪತ್ರಿಕೆ ಇರಬೇಕು ಎಂಬ ಚಿಂತನೆ ನನ್ನಲ್ಲಿತ್ತು. ಕರವೇಯ ಚಟುವಟಿಕೆಗಳು, ಜಿಲ್ಲೆಯ ಸುದ್ದಿಗಳು, ಕನ್ನಡದ ವಿಚಾರಗಳು, ನಾಡಿನ ಸಮಸ್ಯೆಗಳು ಹಾಗೂ ಸಂಘಟನೆಯ ಚಿಂತನೆಗಳು ಕನ್ನಡಿಗರನ್ನು ತಲುಪಬೇಕು ಎಂಬ ಉದ್ದೇಶದಿಂದ ಈ ವಿಚಾರವನ್ನು ಮೊದಲಿಗೆ ದಿನೇಶ್ ಕುಮಾರ್ ಅವರೊಂದಿಗೆ ಚರ್ಚಿಸಿದೆ. ಆ ಚರ್ಚೆಯ ಫಲವಾಗಿಯೇ 'ಕರವೇ ನಲ್ನುಡಿ' ಹುಟ್ಟಿಕೊಂಡಿತು. ಅದರ ಪ್ರಧಾನ ಸಂಪಾದಕರಾಗಿ ಅವರು ಜವಾಬ್ದಾರಿಯನ್ನು ಹೊತ್ತು ಅತ್ಯುತ್ತಮ ಗುಣಮಟ್ಟದಲ್ಲಿ ಪತ್ರಿಕೆಯನ್ನು ರೂಪಿಸಿದರು. ಕರವೇಯ ಎಲ್ಲ ಜಿಲ್ಲೆಗಳ ಮಾಹಿತಿ, ಕನ್ನಡಪರ ಹೋರಾಟಗಳು, ನಾಡಿನ ಸಮಸ್ಯೆಗಳು ಹಾಗೂ ಸಂಘಟನೆಯ ಧ್ಯೇಯ-ಧೋರಣೆಗಳನ್ನು ಅಚ್ಚುಕಟ್ಟಾಗಿ ಕನ್ನಡಿಗರ ಮನೆಮನೆಗೆ ತಲುಪಿಸುವ ಮಹತ್ತರ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕರವೇ ನಲ್ನುಡಿಯಿಂದಲೇ ಅವರು ನನ್ನ ಜೊತೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಾ ಸಂಘಟನೆಯ ಅವಿಭಾಜ್ಯ ಅಂಗವಾಗಿ ಬೆಳೆದರು.
ಕರವೇ ನಲ್ನುಡಿ ಮೂಲಕ ಆರಂಭವಾದ ಅವರ ಸಂಘಟನಾ ಪಯಣ ನಂತರ ಇನ್ನಷ್ಟು ವಿಸ್ತಾರಗೊಂಡಿತು. ಸಂಘಟನೆಯ ಅಧಿಕೃತ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಸಂಚಾಲಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ಅವರು, ಕರವೇಯ ವಿಚಾರಧಾರೆ, ಹೋರಾಟಗಳು, ಪ್ರಕಟಣೆಗಳು ಮತ್ತು ಸಂಘಟನೆಯ ಪ್ರತಿಯೊಂದು ಚಟುವಟಿಕೆಯನ್ನು ಲಕ್ಷಾಂತರ ಕನ್ನಡಿಗರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಸಾಮಾಜಿಕ ಜಾಲತಾಣವನ್ನು ಕೇವಲ ಮಾಹಿತಿ ಹಂಚುವ ವೇದಿಕೆಯಾಗಿಯಲ್ಲ, ಕನ್ನಡದ ಪರವಾದ ವೈಚಾರಿಕ ಹೋರಾಟದ ಪ್ರಬಲ ಮಾಧ್ಯಮವನ್ನಾಗಿ ರೂಪಿಸುವಲ್ಲಿ ಅವರ ಪರಿಶ್ರಮ ಮತ್ತು ದೂರದೃಷ್ಟಿ ಅಪಾರವಾಗಿದೆ.
ಸಂಘಟನೆಯ ಬೆಳವಣಿಗೆಯಲ್ಲಿ ಅವರ ನಿಸ್ವಾರ್ಥ ಸೇವೆ, ಸಂಘಟನಾ ಸಾಮರ್ಥ್ಯ ಮತ್ತು ಬರವಣಿಗೆಯ ಶಕ್ತಿಯನ್ನು ಪರಿಗಣಿಸಿ ನಂತರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿ ನೀಡಲಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಸಂಘಟನೆಯ ಬೆಳವಣಿಗೆಗಾಗಿ ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿಕೊಂಡು ಕರವೇಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ದಿನೇಶ್ ಕುಮಾರ್ ಅವರ ಬರವಣಿಗೆಯ ಬಗ್ಗೆ ನನಗೆ ವಿಶೇಷವಾದ ಅಭಿಮಾನವಿದೆ. ಅವರ ಲೇಖನಗಳನ್ನು ಓದಲು ಆರಂಭಿಸಿದರೆ ಮುಗಿಸದೇ ಎದ್ದೇಳಲು ಸಾಧ್ಯವಿಲ್ಲ. ಅವರ ಪದಗಳಿಗೆ ಜೀವವಿದೆ, ಆಲೋಚನೆಗಳಿಗೆ ಆಳವಿದೆ, ಅಕ್ಷರಗಳಿಗೆ ಹೋರಾಟದ ಶಕ್ತಿಯಿದೆ. ಕನ್ನಡದ ಬಗ್ಗೆ ಬರೆಯುವಾಗ ಅವರ ಬರಹ ಕನ್ನಡಿಗರ ಮನಸ್ಸನ್ನು ಮುಟ್ಟುತ್ತದೆ; ಕನ್ನಡದ ವಿರೋಧಿಗಳ ಬಗ್ಗೆ ಬರೆಯುವಾಗ ಅದೇ ಅಕ್ಷರಗಳು ಸಿಡಿಲಿನಂತೆ ಸಿಡಿಯುತ್ತವೆ. ಬರವಣಿಗೆಯನ್ನು ಆಯುಧವನ್ನಾಗಿ ಮಾಡಿಕೊಂಡು ಸಮಾಜದ ಪರವಾಗಿ ನಿಲ್ಲಬಲ್ಲ ಅಪರೂಪದ ಲೇಖಕರಲ್ಲಿ ದಿನೇಶ್ ಕುಮಾರ್ ಅವರು ಒಬ್ಬರು.
ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಅಧಿಕೃತ ಬರವಣಿಗೆಯಾಗಲಿ, ಹೋರಾಟದ ಕರೆ ಆಗಲಿ, ಪ್ರಕಟಣೆ ಆಗಲಿ ಅಥವಾ ಚಿಂತನಾ ಲೇಖನವಾಗಲಿ ದಿನೇಶ್ ಕುಮಾರ್ ಅವರ ಸ್ಪರ್ಶವಿದ್ದಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ ಎನ್ನುವ ವಿಶ್ವಾಸ ನನ್ನದು. ಇಂದಿಗೂ ಕರವೇಯ ಅನೇಕ ಪ್ರಮುಖ ಬರವಣಿಗೆಗಳು ಅವರ ಲೇಖನಿಯಿಂದಲೇ ರೂಪುಗೊಳ್ಳುತ್ತಿವೆ. ಅವರ ಬರವಣಿಗೆಯೇ ಸಂಘಟನೆಯ ಧ್ವನಿಯಾಗಿ, ಹೋರಾಟದ ಚೈತನ್ಯವಾಗಿ ರೂಪುಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ ಮತ್ತು ಕನ್ನಡದ ಕಳಕಳಿಯನ್ನು ಉಳಿಸಿಕೊಂಡಿರುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಅಂತಹ ಸಂದರ್ಭದಲ್ಲಿ ವೃತ್ತಿ ನಿಷ್ಠೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಕನ್ನಡದ ಮೇಲಿನ ಅಪಾರ ಪ್ರೀತಿಯನ್ನು ಬದುಕಿನ ಮೌಲ್ಯವನ್ನಾಗಿಸಿಕೊಂಡಿರುವ ದಿನೇಶ್ ಕುಮಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರವಿ ಬೆಳಗೆರೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಮಂಜಸವಾದ ಗೌರವವಾಗಿದೆ. ಈ ಪ್ರಶಸ್ತಿ ಅವರ ವ್ಯಕ್ತಿತ್ವಕ್ಕೂ, ಅವರ ಪತ್ರಿಕೋದ್ಯಮಕ್ಕೂ ಮತ್ತು ಕನ್ನಡದ ಸೇವೆಗೂ ಸಂದ ನ್ಯಾಯವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ, ನನ್ನ ವೈಯಕ್ತಿಕ ಪರವಾಗಿ ಹಾಗೂ ರಾಜ್ಯದ ಸಮಸ್ತ ಕರವೇ ಕಾರ್ಯಕರ್ತರ ಪರವಾಗಿ ಎಸ್.ಸಿ. ದಿನೇಶ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮತ್ತು ಕನ್ನಡದ ಮೇಲಿನ ಅಚಲವಾದ ಬದ್ಧತೆ ಇದೇ ರೀತಿ ಮುಂದುವರಿಯಲಿ. ಅವರ ಲೇಖನಿ ಇನ್ನಷ್ಟು ಹರಿತವಾಗಲಿ. ಕನ್ನಡ ನಾಡು-ನುಡಿ, ಸಮಾಜ ಮತ್ತು ಪತ್ರಿಕೋದ್ಯಮಕ್ಕೆ ಅವರಿಂದ ಇನ್ನಷ್ಟು ಅಮೂಲ್ಯ ಕೊಡುಗೆಗಳು ದೊರೆಯಲಿ. ಪತ್ರಿಕಾ ರಂಗದಲ್ಲಿ ಅವರ ಹೆಜ್ಜೆ ಗುರುತುಗಳು ಇನ್ನಷ್ಟು ಆಳವಾಗಿ ಮೂಡಲಿ ಎಂಬುದು ನನ್ನ ಹಾರೈಕೆ.
ರವಿ ಬೆಳಗೆರೆ ಪ್ರಶಸ್ತಿ ಪುರಸ್ಕೃತರಾದ ಎಸ್.ಸಿ. ದಿನೇಶ್ ಕುಮಾರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕುಟುಂಬದ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
– ಟಿ.ಎ. ನಾರಾಯಣಗೌಡರು
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು