30/05/2026
ಒಂದು ವೇಳೆ ಮನುಷ್ಯ ವಿನಾಶದಿಂದ ಹೊರತಾಗಿರದೆ, ಆ ವಿನಾಶವೇ ಪ್ರಕೃತಿಯ ವಿನ್ಯಾಸದ ಒಂದು ಭಾಗವಾಗಿದ್ದರೆ?
"ನಾನೇ ಪ್ರಕೃತಿ."
ಕೇವಲ ಅದರ ಒಂದು ಭಾಗವಲ್ಲ.
ಮೊನ್ನೆಯಷ್ಟೇ, ನಾನೂ ನನ್ನ ಸ್ನೇಹಿತ ಸಂತೋಷ್ ಕಾವೇರಿ ನದಿಯ ಆಳವಿಲ್ಲದ ಹರಿಯುವ ನೀರಿನಲ್ಲಿ ಕಾಲಿಟ್ಟುಕೊಂಡು ಕೂತಿದ್ದೆವು. ನಮ್ಮ ಮಾತು ಪ್ರಕೃತಿ, ಸುಸ್ಥಿರ ಅಭಿವೃದ್ಧಿ (sustainable development) ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ (inclusive growth) ಕಡೆಗೆ ಹೊರಳಿತ್ತು. ನಮ್ಮ ಪಕ್ಕದಲ್ಲೇ ಬಿದ್ದಿದ್ದ ಒಂದು ಒಣ ಮರದ ದಿಮ್ಮಿಯನ್ನು ಗೆದ್ದಲು ಹುಳುಗಳು ತಿನ್ನುತ್ತಿದ್ದವು.
ಆ ಗೆದ್ದಲುಗಳು ಆ ಮರದ ದಿಮ್ಮಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಳ್ಳುತ್ತಿದ್ದವು, ಆದರೆ ಅದೇ ಪ್ರಕ್ರಿಯೆಯಲ್ಲಿ ಆ ದಿಮ್ಮಿಯನ್ನು ನಿಧಾನವಾಗಿ ನಾಶಪಡಿಸುತ್ತಿದ್ದವು. ಆ ದೃಶ್ಯ ನಮ್ಮ ಮನಸ್ಸಿನಲ್ಲಿ ಹಾಗೇ ಉಳಿದುಬಿಡ್ತು.
ಅದು ಸುಸ್ಥಿರ ಬಳಕೆಯೆ? ಎಲ್ಲರನ್ನೂ ಒಳಗೊಂಡ ಬೆಳವಣಿಗೆಯೆ? ಅಥವಾ ಪ್ರಕೃತಿ ತನ್ನದೇ ಆದ ವಿನ್ಯಾಸವನ್ನು, ನಿಯಮವನ್ನು ಪಾಲಿಸುತ್ತಿತ್ತೆ?
ಆಗಲೇ ಆ ಮುಜುಗರ ತರಿಸುವ, ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತಹ ಆಲೋಚನೆಯೊಂದು ಹುಟ್ಟಿಕೊಂಡಿತು:
ನಾವೂ ಕೂಡ ಇದನ್ನೇ ಮಾಡುತ್ತಿಲ್ಲವೇ?
ನಮ್ಮ ಸ್ವಂತ ವಿನಾಶವನ್ನು ನಾವೇ ವೇಗಗೊಳಿಸಿಕೊಳ್ಳಲೆಂದೇ ನಾವು ಬುದ್ಧಿವಂತರಾದೆವೆ?
ಅಥವಾ, ಈ ಜೀವಸಂಕುಲದ ಚಕ್ರದಲ್ಲಿ ತಮ್ಮ ಪಾತ್ರವೇನು ಎಂಬ ಸಂಪೂರ್ಣ ಅರಿವಿನೊಂದಿಗೆ ಕೆಲವು ಜೀವಿಗಳು ಹೀಗೆಯೇ ನಿರ್ಗಮಿಸಬೇಕು ಎನ್ನುವುದು ಪ್ರಕೃತಿಯ ಇಚ್ಛೆಯೆ? ಅಕ್ಕನ ವಚನದಂತೆ "ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ,
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ" ಎಂಬಂತೆ...
ಬಹಳಷ್ಟು ಜನ ಹೇಳುತ್ತಾರೆ:
"ನಾನು ಪ್ರಕೃತಿಯ ಒಂದು ಭಾಗ" ಅಂತ. ಆದರೆ, ಅದೇ ವ್ಯಕ್ತಿ
"ನಾನೇ ಪ್ರಕೃತಿ" ಎಂದು ಹೇಳಿದಾಗ ಏನಾಗುತ್ತದೆ?
ಆ ಅರಿವು ನಿಜಕ್ಕೂ ಅಂತರಾಳದಿಂದಲೇ ಮೂಡಿದರೆ, ಹೇಗೆ ಬದುಕಬೇಕು, ಯಾವುದನ್ನು ಬಳಸಬೇಕು, ಏನನ್ನು ಕಟ್ಟಬೇಕು ಅಥವಾ ಹೇಗೆ ಕಣ್ಮರೆಯಾಗಬೇಕು ಎಂದು ವಿವರಿಸಲು ಹೊರಗಿನ ಯಾವ ತತ್ವಜ್ಞಾನದ, ಸ್ಕ್ರಿಪ್ಟ್‌ನ ಅಗತ್ಯವಿರುವುದಿಲ್ಲ. ಆದರೆ, ಈ ಪಯಣದಲ್ಲಿ ಎಲ್ಲೋ ಒಂದು ಕಡೆ, ನಮ್ಮಲ್ಲಿ ಕೆಲವರು ತಿಳಿದೋ ತಿಳಿಯದೆಯೋ ಈ ವಿನಾಶವನ್ನು ವೇಗಗೊಳಿಸುವ ವೇಗವರ್ಧಕಗಳಾಗಿ (catalysts) ಬದಲಾಗಿದ್ದೇವೆ. ಮತ್ತು ಬಹುಶಃ, ಕೆಲವೊಮ್ಮೆ, ನಾವೇ ಆ ಗೆದ್ದಲು ಹುಳುಗಳು.
ನಂತರ, ಈ ಆಲೋಚನೆಯನ್ನು ಪ್ರೊಫೆಸರ್ ಆಶಿಶ್ ಬಿಲ್ ಮೋಹನ್ ಅವರೊಂದಿಗೆ ಹಂಚಿಕೊಂಡಾಗ, ಅವರು ಆರಂಭದಲ್ಲಿ "ನೀವೇಕೆ ಇಷ್ಟೊಂದು ನಿರಾಶಾವಾದಿಗಳಾಗುತ್ತಿದ್ದೀರಿ (pessimistic)?" ಎಂದು ಕೇಳಿದರು. ಆದರೆ ಮಾತು ಆಳಕ್ಕಿಳಿದಂತೆ, ನಮ್ಮಲ್ಲಿದ್ದ ಖಚಿತತೆಯ ಜಾಗವನ್ನು ಮೌನ ಆವರಿಸಿಕೊಳ್ಳತೊಡಗಿತು.
ಆಗ ಅವರು ಮೈಕಲ್ ಜಾಕ್ಸನ್‌ನ "ಅರ್ತ್ ಸಾಂಗ್" (Earth Song) ಅನ್ನು ನಮ್ಮೊಂದಿಗೆ ಹಂಚಿಕೊಂಡರು.
ಅಂದು ರಾತ್ರಿ ನಾನು ಆ ಹಾಡನ್ನು ಮತ್ತೆ ನೋಡಿದೆ.
ಮನುಕುಲವು ಹೇಗೆ ಒಂದೇ ಸಮಯದಲ್ಲಿ ಸೃಷ್ಟಿಕರ್ತನಾಗಿಯೂ ಮತ್ತು ವಿನಾಶಕನಾಗಿಯೂ ವರ್ತಿಸುತ್ತದೆ ಎಂಬುದರ ನೋವಿನ ನೆನಪದು. ಬಹುಶಃ ಅದಕ್ಕಾಗಿಯೇ ಆ ಹಾಡು ಇಂದಿಗೂ ಮನಸ್ಸನ್ನು ಕದಡುತ್ತದೆ. ನನಗೂ ಗೊತ್ತು, ನಾನೂ ಆ ಗೆದ್ದಲು ಹುಳುಗಳಲ್ಲಿ ಒಬ್ಬ, ಬಹುಶಃ ವಿನಾಶವನ್ನು ವೇಗಗೊಳಿಸುವ ಗೆದ್ದಲು ನಾನಲ್ಲದಿರಬಹುದು.
ಆದರೆ ಆ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ:
ಅಸಲಿಗೆ ನಾವಾರು?
🎵 ಅರ್ತ್ ಸಾಂಗ್ – ಮೈಕಲ್ ಜಾಕ್ಸನ್
https://youtu.be/XAi3VTSdTxU?si=00m2AxaMsOgSq80U