19/07/2026
ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್
ಸರ್ಕಾರದ ವಿರುದ್ಧ ಜ್ಞಾನ ಸಿಂಧುಸ್ವಾಮಿ ಆಕ್ರೋಶ
ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರ ವಿರುದ್ಧ ವಿವಿಧ ಸಂದರ್ಭಗಳಲ್ಲಿ 6 ಪ್ರಕರಣಗಳನ್ನು ದಾಖಲಿಸಿ, ಇದೀಗ ರೌಡಿಶೀಟ್ ತೆರೆಯಲಾಗಿದೆ. ಇದು ಜನರ ಧ್ವನಿಯನ್ನು ಕುಗ್ಗಿಸುವ ಪ್ರಯತ್ನವಾಗಿದ್ದು, ನ್ಯಾಯದ ಪರವಾಗಿ ಕಾರ್ಯನಿರ್ವಹಿಸಬೇಕಾದ ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಜಿಲ್ಲೆಯಲ್ಲಿ ಎಲ್ಲಿ ಭ್ರಷ್ಟಾಚಾರ, ಅನ್ಯಾಯ ಅಥವಾ ಸಾರ್ವಜನಿಕ ಸಮಸ್ಯೆಗಳು ಎದುರಾದರೂ ಅಲ್ಲಿಗೆ ತೆರಳಿ ಜನರ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅಧಿಕಾರಿಗಳು ಎಸಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ್ದೇ ಅವರ ತಪ್ಪೇ? ಕೇವಲ ಪ್ರಶ್ನಿಸಿದ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಿ, ನಂತರ ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ರೌಡಿಶೀಟ್ ತೆರೆಯುವುದು ನ್ಯಾಯಸಮ್ಮತ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪದೇಪದೇ ಪ್ರಶ್ನೆಗಳು ಉದ್ಭವಿಸಿದ್ದರೂ, ಅವುಗಳನ್ನು ಸರಿಪಡಿಸುವ ಬದಲು ಪ್ರಶ್ನಿಸುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸೇಡಿನ ರಾಜಕಾರಣ ನಡೆಸುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಜ್ಞಾನ ಸಿಂಧುಸ್ವಾಮಿ ಆರೋಪಿಸಿದ್ದಾರೆ.
ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಪ್ರಶ್ನಿಸಬಾರದೇ? ಪ್ರಶ್ನಿಸುವುದನ್ನೇ ಅಪರಾಧವೆಂದು ಪರಿಗಣಿಸಿದರೆ ಜನರಿಗೆ ನ್ಯಾಯ ಹೇಗೆ ದೊರೆಯುತ್ತದೆ? ಇಂತಹ ಕ್ರಮಗಳಿಂದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಬಹುದು ಎಂದು ಸರ್ಕಾರ, ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ. ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ರೌಡಿತನವಾಗಿದ್ದರೆ, ರಾಜ್ಯದ ಸಾವಿರಾರು ಕೆಆರ್‌ಎಸ್ ಕಾರ್ಯಕರ್ತರು ಅಂತಹ ಹೋರಾಟಕ್ಕೆ ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಎಂ ವಿರುದ್ಧ ಯಾವಾಗ ರೌಡಿಶೀಟ್ ತೆರೆಯಲಾಗುತ್ತದೆ?
2023ರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ 19 ಕ್ರಿಮಿನಲ್ ಪ್ರಕರಣಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 13 ಪ್ರಕರಣಗಳು ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರ ವಿರುದ್ಧ 42 ಪ್ರಕರಣಗಳು ದಾಖಲಾಗಿವೆ. ಆದರೆ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರ ವಿರುದ್ಧ ಕೇವಲ 6 ಪ್ರಕರಣಗಳಿರುವುದನ್ನು ಆಧಾರವನ್ನಾಗಿ ಮಾಡಿಕೊಂಡು ರೌಡಿಶೀಟ್ ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಆರು ಪ್ರಕರಣಗಳು ಕೊಲೆ, ದರೋಡೆ ಅಥವಾ ಸಮಾಜದಲ್ಲಿ ಭಯ ಹುಟ್ಟಿಸುವ ರೀತಿಯ ಅಪರಾಧಗಳಿಗೆ ಸಂಬಂಧಪಟ್ಟದ್ದಲ್ಲ. ಜನಪರ ಹೋರಾಟಗಳು ಮತ್ತು ನ್ಯಾಯಕ್ಕಾಗಿ ನಡೆಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳಾಗಿವೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಇದೇ ರೀತಿಯ ಕ್ರಮವನ್ನು ಪೊಲೀಸ್ ಇಲಾಖೆ ಯಾವಾಗ ಕೈಗೊಳ್ಳುತ್ತದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಜ್ಞಾನ ಸಿಂಧುಸ್ವಾಮಿ ಒತ್ತಾಯಿಸಿದ್ದಾರೆ.
ಇದೇ ರೀತಿಯ ಕ್ರಮಗಳು ಮುಂದುವರಿದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಅರಿತು ನ್ಯಾಯಯುತವಾಗಿ ಜನಸೇವೆ ಮಾಡಬೇಕು. ಅಧಿಕಾರದ ದುರುಪಯೋಗ ಮಾಡಿ ರಾಜಕೀಯ ನಡೆಸುವ ಬದಲು, ಅಗತ್ಯವಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನೇರ ರಾಜಕೀಯಕ್ಕೆ ಬರಲಿ. ಇಲ್ಲವಾದರೆ ತುಮಕೂರು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ಸವಾಲು ಹಾಕಿದ್ದಾರೆ.