23/02/2026
ಮೂರ್ತಿಯನ್ನು ಮುತ್ತಿಕೊಂಡ ಕಟ್ಟಿಗೆಗಳು…
ಬಾಹುಬಲಿಯ ಮಹಾಮೂರ್ತಿಗೆ ಮಹಾಮಜ್ದನ ಮಾಡುವುದಕ್ಕೆ ತಯಾರುಗೊಳಿಸುವುದೆಂದರೆ ಅದು ವರ್ಷಪೂರ್ತಿಯ ಕೆಲಸ. ಮಹಾಮಸ್ತಾಭಿಷೇಕದ ಮೊದಲು ಆಗಸದೆತ್ತರದ ಭವ್ಯ ಮೂರ್ತಿಯನ್ನು ತೊಳೆದು ಸ್ವಚ್ಚಮಾಡಬೇಕು. ಕಳೆದ ಹನ್ನೆರಡು ವರ್ಷಗಳ ಹಿಂದಿನ ಮಹಾಮಸ್ತಾಭಿಷೇಕ ಸಂಪೂರ್ಣಗೊಂಡು ನಂತರ ನಿನ್ನೆಯ ತನಕದ ಮಳೆ ನೀರಿನ ಪಾಚಿ,ಗಾಳಿಯ ಧೂಳು ಎಲ್ಲವೂ ಅಂಟುತ್ತಲೇ ಉಳಿದಿರುವುದನ್ನು ಮುಂದಿನ ವರ್ಷದಲ್ಲಿ ನೆರವೇರಲಿರುವ ಮಹಮಜ್ಜನಕ್ಕಾಗಿ ಕ್ರಮ ನಿಯಮಗಳ ಪ್ರಕಾರ ತೊಳೆಯಬೇಕು.
ಕಾರ್ಕಳದಲ್ಲಿನ 42 ಅಡಿಗಳಷ್ಟು ಎತ್ತರದ ಭವ್ಯ ಮೂರ್ತಿಗೆ ಮುಂದಿನ 2027ರ ಫೆಬ್ರುವರಿ ತಿಂಗಳಲ್ಲಿ ನೆರವೇರಬಹುದಾದ ಮಹಾಮಸ್ತಕಾಭಿಷೇಕಕ್ಕೆ ಈಗಿಂದಲೆ ಸಿದ್ಧತೆಗಳು ತಯಾರಾಗತೊಡಗಿದೆ. ಮೂರ್ತಿಯನ್ನು ತೊಳೆಯುವುದು ಒಂದೇ ಕೆಲಸ ಪುರಾತತ್ವ ಇಲಾಖೆಯದ್ದಷ್ಟೆ. ಇನ್ನು ಮುಂದೆ ಮಹಮಸ್ತಕಾಭಿಷೇಕಕ್ಕೆ ಕಷಾಯ ತಯಾರಿಸುವುದಕ್ಕಾಗಿ ಬಳಸುವ ನಿಸರ್ಗದತ್ತ ವಸ್ತುಗಳನ್ನು ಸಂಗ್ರಹಿಸುವುದಕ್ಕೂ ಕೆಲಸ ಶುರುಮಾಡಬೇಕು. ಮಹಾಮಸ್ತಕಾಭಿಷೇಕದ ಸಮಿತಿಯವರು ಅದೆಲ್ಲವನ್ನೂ ಮಾಡಿಸಿಕೊಳ್ಳುವುದು. ಅದನ್ನೆಲ್ಲ ಒಟ್ಟುಮಾಡಿ ಕೊಡುವವರು ಇದ್ದಾರೆ,ತಂಡಗಳು ಇದೆ. ಅವರನ್ನು ಸಂಪರ್ಕಿಸಿದರೆ ಮುಗಿಯಿತು , ಎಲ್ಲವೂ ಅವರಿಂದ ಸಿದ್ಧವಾಗುತ್ತದೆ.
ಹಾಲಿನ ಅಭಿಷೇಕಕ್ಕೆ ನಂದಿನಿ (ಕೆ. ಎಂ. ಎಫ್)ಡೈರಿಯವರಿಂದ ಹಾಲು ಸುಲಭವಾಗಿ ದೊರಕುವುದು ಹೊರತುಪಡಿಸಿದರೆ ಬಾಕಿ ಎಲ್ಲವೂ ತಿಂಗಳುಗಟ್ಟಲೆಯ ಅಲೆದಾಟದಿಂದಲೆ ಸಂಗ್ರಹವಾಗಬೇಕು. ಹನ್ನೆರಡು ದಿನಗಳ ಮಹಮಸ್ತಕಾಭಿಷೇಕ ಮಾಡುವುದಕ್ಕೆ ಬಳಸುವ ಆಯುರ್ವೇದ ಕಷಾಯದ ಸಸ್ಯಮೂಲ ವಸ್ತುಗಳು ಎಷ್ಟು ಕ್ವಿಂಟಾಲು ತೂಕಗಳಲ್ಲಿ ಸಂಗ್ರಹವಾಗಬೇಡ?
ಮೂರ್ತಿಯ ಮೈಮೇಲಿನ ಕಪ್ಪು ಪಾಚಿಯನ್ನು ತೆಗೆಯುವ ಕೆಲಸವನ್ನು ಪುರಾತತ್ವ ಇಲಾಖೆಯೆ ಮಾಡಿಸುತ್ತದೆ. ಅದಕ್ಕೆ ಬೇಕಾದ ದ್ರಾವಣವನ್ನು ಇಲಾಖೆಯ ಶಿಫಾರಸ್ಸಿನಂತೆಯೆ ಬಳಸಲಾಗುತ್ತದೆ. ಕಡಿಮೆಯೆಂದರೂ ಎರಡು ವಾರಗಳಷ್ಟು ಕೆಲಸವಿದೆ.ಇಬ್ಬರು ಮೂವರಷ್ಟೇ ಅಟ್ಟಳಿಗೆ ಹತ್ತಿ ತೊಳೆಯುವ ಕೆಲಸ ಮಾಡಬೇಕಾಗುವುದು.
ಹಿಂದೆ,ಪ್ರತಿ ಐದು ವರ್ಷಕ್ಕೊಂದು ಸಲ ಹಾಗೆ ಸ್ವಚ್ಚ ಮಾಡುತ್ತಿದ್ದುದು ಇತ್ತು. ಕಾಲಕ್ರಮೇಣ ಅದು ಆಗದೆ ಈಗ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಾತ್ರ ತೊಳೆದು ಸ್ವಚ್ಚ ಮಾಡಲಾಗುತ್ತದೆ.
ಶಿಲಾಮೂರ್ತಿಗೆ ಹಾನಿಯಾಗಬಲ್ಲ ದ್ರಾವಣವನ್ನು ಬಳಸುವಂತಿಲ್ಲ. ಸಂಪೂರ್ಣ ತಿಕ್ಕಿ ತೊಳೆದು ಸ್ವಚ್ಚವಾದ ನಂತರ ಆಯುರ್ವೇದ ಕಷಾಯ ಬಳಸಿ ಒಮ್ಮೆ ತೊಳೆಯಲಾಗುತ್ತದೆ.
ಆ ರೀತಿಯಲ್ಲಿ ಮರದ ಉದ್ದನೆಯ ಗಳ/ಎಳೆ/ಕೋಲುಗಳ ಅಟ್ಟಳಿಗೆ ಕಟ್ಚಬೇಕಾಗಿರುವುದರಿಂದ,ಕಷ್ಟದ ಸಂಗತಿಯಾಗಿರುವುದರಿಂದಲೇನೊ ಪುರಾತತ್ವ ಇಲಾಖೆಯು ಪ್ರತಿ ಐದು ವರ್ಷವಾಧಿಯಲ್ಲಿ ಮೂರ್ತಿ ಸ್ವಚ್ಚ ಮಾಡುವ ಕೆಲಸವನ್ನು ಕೈಬಿಟ್ಟಿರಬಹುದು. ಜೈನ ಸಮಾಜ ಬಾಂಧವರು ಅಟ್ಟಳಿಗೆಯ ನೆರವಿನ ಆಸಕ್ತಿ ತೋರಿಸಬೇಕು ಹಾಗೆ ಪ್ರತಿ ಐದು ವರ್ಷದಲ್ಲೊಮ್ಮೆ ಮೂರ್ತಿ ಸ್ವಚ್ಚಗೊಳ್ಳುವಂತಾಗಬೇಕು.
-ವಿ.ಕೆ .ವಾಲ್ಪಾಡಿ
-ಚಿತ್ರಕೃಪೆ: ಆದಿರಾಜ ಅಜಿರಿ,ಕಾರ್ಕಳ