02/11/2026
*ಪಂಜಿಮೊಗರು ಜಂಕ್ಷನ್‌ನಲ್ಲಿ ಹಾದಿ ತಪ್ಪಿದ ಸ್ವಚ್ಛತೆ: ಸಾರ್ವಜನಿಕ ಚರಂಡಿಗೆ ಮಲ-ಮೂತ್ರ ವಿಸರ್ಜನೆ; ಪಾಲಿಕೆ, ಕಾರ್ಪೊರೇಟರ್ ಮೌನಕ್ಕೆ ಕಾರಣ ಏನು!*
*ದೀಪು ಶೆಟ್ಟಿಗಾರ್ ಮಂಗಳೂರು*
ಮಂಗಳೂರು: 'ಸ್ವಚ್ಛ ನಗರಿ' ಎಂದು ಬೀಗುವ ಮಂಗಳೂರು ಮಹಾನಗರದಲ್ಲಿ ಕಣ್ಣಿಗೆ ಕಾಣುವಂತೆಯೇ ಸಾರ್ವಜನಿಕ ಆರೋಗ್ಯಕ್ಕೆ ಕಂಟಕ ತರುವ ಘೋರ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಂಗಳೂರಿನ ಪ್ರಮುಖ ಜಂಕ್ಷನ್‌ಗಳಲ್ಲೊಂದಾದ ಪಂಜಿಮೊಗರು ಜಂಕ್ಷನ್ ವ್ಯಾಪ್ತಿಯಲ್ಲಿ ಮಾನವ ತ್ಯಾಜ್ಯವನ್ನು (ಮಲ ಮತ್ತು ಮೂತ್ರ) ನೇರವಾಗಿ ಸಾರ್ವಜನಿಕ ಮಳೆನೀರು ಹರಿಯುವ ಚರಂಡಿಗೆ ಬಿಡಲಾಗುತ್ತಿದ್ದು, ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕು ದೂಡುವಂತಾಗಿದೆ.
*ಕಣ್ಣು ಮುಚ್ಚಿ ಕುಳಿತ ಮಹಾನಗರ ಪಾಲಿಕೆ ಮತ್ತು ಅಧಿಕಾರಿಗಳು:*
ಸಾಮಾನ್ಯ ನಾಗರಿಕರು ಒಂದು ಸಣ್ಣ ಮನೆ ಕಟ್ಟಬೇಕಾದರೂ ನೂರಾರು ನಿಯಮಗಳನ್ನು ಜರಡಿ ಹಿಡಿದು ಪೀಡಿಸುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಮತ್ತು ಮಹಾನಗರ ಪಾಲಿಕೆ (MCC) ಅಧಿಕಾರಿಗಳು, ಇಷ್ಟು ದೊಡ್ಡ ಕಟ್ಟಡಕ್ಕೆ ಕನಿಷ್ಠ ಒಳಚರಂಡಿ (UGD) ಅಥವಾ ವೈಜ್ಞಾನಿಕ ಸೆಪ್ಟಿಕ್ ಟ್ಯಾಂಕ್ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸದೆ ಇಲ್ಲಿ ಹಲವಾರು ಕಟ್ಟಡಗಳಿಗೆ ಪರವಾನಗಿ ಕೊಟ್ಟಿದ್ದು ಹೇಗೆ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ. ಕಟ್ಟಡದ ನಕ್ಷೆ ಮಂಜೂರಾತಿ ಮತ್ತು 'ಸ್ವಾಧೀನ ಪತ್ರ' (OC) ನೀಡುವಾಗ ಅಧಿಕಾರಿಗಳು ದಪ್ಪ ಕೈಬೆಚ್ಚಗೆ ಮಾಡಿಕೊಂಡು ಕಚೇರಿಯಲ್ಲೇ ಕುಳಿತು ಸಹಿ ಹಾಕಿದ್ದಾರೆಯೇ ಎಂಬ ಸಂಶಯ ದಟ್ಟವಾಗಿದೆ. ಇದು ಪಾಲಿಕೆಯ ಸಂಬಂಧಪಟ್ಟ ವಲಯ ಇಂಜಿನಿಯರ್‌ಗಳು ಮತ್ತು ಆರೋಗ್ಯ ನಿರೀಕ್ಷಕರ (Health Inspectors) ಸ್ಪಷ್ಟ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.
*ಸ್ಥಳೀಯ ಕಾರ್ಪೊರೇಟರ್ ಮೌನ ಮುರಿಯುವುದ ಯಾವಾಗ?*
ಇಡೀ ಜಂಕ್ಷನ್ ವ್ಯಾಪ್ತಿಯಲ್ಲಿ ಮಲ-ಮೂತ್ರ ಮಿಶ್ರಿತ ನೀರು ಹರಿಯುತ್ತಿರುವುದರಿಂದ ತೀವ್ರ ದುರ್ವಾಸನೆ ಹರಡಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಇದೆ. ಆದರೆ, ಈ ವಾರ್ಡ್‌ನ ಹೊತ್ತಿರುವ ಸ್ಥಳೀಯ ಕಾರ್ಪೊರೇಟರ್ ಅವರು ಇಷ್ಟೆಲ್ಲಾ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಲ್ಡರ್‌ಗಳ ರಾಜಕೀಯ ಪ್ರಭಾವಕ್ಕೆ ಮಣಿದು ಜನಪ್ರತಿನಿಧಿಗಳೇ ಸಾರ್ವಜನಿಕರ ಆರೋಗ್ಯವನ್ನು ಬಲಿ ಕೊಡುತ್ತಿದ್ದಾರೆಯೇ ಎಂದು ಸ್ಥಳೀಯ ನಾಗರಿಕರು ನೇರವಾಗಿ ಪ್ರಶ್ನಿಸುತ್ತಿದ್ದಾರೆ.
*ಸಾರ್ವಜನಿಕರ ಎಚ್ಚರಿಕೆ:*
"ಮಳೆಗಾಲ ಮುಗಿಯುತ್ತಿದ್ದರೂ ಚರಂಡಿಯಲ್ಲಿ ಇಂತಹ ಕೊಳಚೆ ಹರಿಯುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್‌ನಂತಹ ಮಾರಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮಕ್ಕಳು, ವೃದ್ಧರು ಮನೆಯಿಂದ ಹೊರಬರಲು ಹೆದರುವಂತಾಗಿದೆ" ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ತಕ್ಷಣವೇ ಜಾಗೃತರಾಗಿ ಸ್ಥಳ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಅದಕ್ಕೆ ಸೀಲ್ ಹಾಕಬೇಕು. ಇಲ್ಲದಿದ್ದರೆ ಸ್ಥಳೀಯ ನಾಗರಿಕರನ್ನು ಒಟ್ಟುಗೂಡಿಸಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸುವುದರ ಜೊತೆಗೆ ಮಾನ್ಯ ಲೋಕಾಯುಕ್ತಕ್ಕೆ ಅಧಿಕೃತ ದೂರು ನೀಡಲಾಗುವುದು